ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಸಾರ್ವಜನಿಕರು ಮತ್ತು ಉದ್ಯಮಗಳಿಗೆ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ. ಇದಕ್ಕಾಗಿ ಸರ್ಕಾರವು ಐದು ಸ್ಥಳಗಳನ್ನು ಗುರುತಿಸಿದೆ. ಆದರೆ ಇವುಗಳ ಪೈಕಿ ಯಾವುದನ್ನೂ ಆಖೈರು ಮಾಡಿಲ್ಲ. ಈ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ಸೇರಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಪಾಟೀಲ್, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಈಗಾಗಲೇ ತೀರ್ಮಾನಿಸಲಾಗಿದೆ ಎನ್ನುವ ವರದಿಗಳಿಗೆ ಆಧಾರವಿಲ್ಲ. ದಾಬಸ್‌ಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ ಒಟ್ಟು ಐದು ಸ್ಥಳಗಳನ್ನು ನಾವು ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ಇವತ್ತು ಇನ್ನೂ ಒಂದು ಸ್ಥಳದ ಬಗ್ಗೆಯೂ ಚರ್ಚೆ ಆಗಿದೆ. ಇವುಗಳ ಬಗ್ಗೆ ವಸ್ತುಸ್ಥಿತಿ ಆಧರಿಸಿ ಮತ್ತು ಸಾಧಕ-ಬಾಧಕಗಳನ್ನು ಗಮನಿಸಿ, ವರದಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಮತ್ತೊಂದು ಸುತ್ತು ಸಭೆ ಸೇರಿ, ಸ್ಥಳವನ್ನು ಆಖೈರುಗೊಳಿಸಲಾಗುವುದು ಎಂದು ವಿವರಿಸಿದರು.
ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ ಮಾಡುವಲ್ಲಿ ಯಾರಿಗೂ ರಾಜಕೀಯ ಹಿತಾಸಕ್ತಿಗಳೇನಿಲ್ಲ. ಬೆಂಗಳೂರಿನ ಜನತೆಗೆ ಮತ್ತು ಉದ್ಯಮಿಗಳ ಅನುಕೂಲವಷ್ಟೇ ಇಲ್ಲಿ ಮುಖ್ಯ. ಇದರಿಂದ ನಮ್ಮ ಆರ್ಥಿಕ ಬೆಳವಣಿಗೆಗೆ ಒಳ್ಳೆಯ ಕೊಡುಗೆ ಬರಬೇಕು. ಇದರ ಜೊತೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಅಂತಿಮವಾಗಿ ಬೆಂಗಳೂರು ನಗರವು ಇನ್ನೊಂದು ಸ್ತರಕ್ಕೆ ಏರಬೇಕು ಎನ್ನುವುದಷ್ಟೇ ಸರ್ಕಾರದ ಗುರಿಯಾಗಿದೆ. ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮಗೆ ಸ್ಥಳಾವಕಾಶಕ್ಕೇನೂ ಕೊರತೆ ಇಲ್ಲ. ಬೆಂಗಳೂರಿನ ಸುತ್ತಮುತ್ತಲೂ ಜಾಗವಿದ್ದು, ಇದರಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.