ಬೆಳಗಾವಿ: ಮನೆ ಮಗನಿಗೆ ಮತ ನೀಡಿ ಎಂದು ಕೇಳುತ್ತಿದ್ದೇವೆ. ಬೆಳಗಾವಿ ಮಕ್ಕಳ ಕೈ ಬಲಪಡಿಸಿ ಅಂತಾ ಎಲ್ಲ ಕಡೆ ಹೇಳುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ನಗರದಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಜಯಭೇರಿ ಬಾರಿಸಲು ಆಶೀರ್ವಾದ ಮಾಡುವಂತೆ ಕೇಳಿಕೊಳ್ಳುತ್ತಿದ್ದೇವೆ. ಬಿಜೆಪಿ ವಿರುದ್ಧ ಲೋಕಲ್ ಅಸ್ತ್ರ ಎನ್ನುವುದಕ್ಕಿಂತ ಇದು ನಮ್ಮ ಸ್ವಾಭಿಮಾನದ ಪ್ರಶ್ನೆ. ನಮ್ಮ ನೆಲ, ಜಲ ಹೋರಾಟ ಮಾಡಬೇಕಾಗುತ್ತದೆ. ಅಭಿವೃದ್ಧಿ ಪರ ಚಿಂತನೆ ಬೇಕಾಗುತ್ತದೆ. ಬೆಳಗಾವಿಗೆ ಕೊಟ್ಟಂತ ಕೊಡುಗೆ ಬಗ್ಗೆ ಕೇಳುತ್ತಿದ್ದೇವೆ ಎಂದರು.
ತಮ್ಮ ಭವಿಷ್ಯ ತ್ಯಾಗ ಮಾಡಿ ಮಕ್ಕಳು ಚುನಾವಣೆಗೆ ನಿಂತಿದ್ದಾರೆ ಎಂಬ ಸತೀಶ ಜಾರಕಿಹೊಳಿ ಮಾತಿಗೆ, ಇದು ನೂರಕ್ಕೆ ನೂರು ಸತ್ಯ. ಈ ವೃತ್ತಿ ನಮಗೂ ಕೂಡ ಬಹಳ ಕಷ್ಟವಾಗುತ್ತದೆ. ಮಳೆ - ಚಳಿ ಇರಲಿ. ಮನೆಯಲ್ಲಿ ಸುಖ - ದುಃಖದ ಸಂದರ್ಭವೇ ಇರಲಿ. ನಮ್ಮ ವೃತ್ತಿ ಪಾಲನೆ ಮಾಡಬೇಕು. ಎಲ್ಲರಿಗೂ ರಾಜಕಾರಣ ಎಂದರೆ ಸುಲಿದ ಬಾಳೆ ಹಣ್ಣು ಎಂದು ತಿಳಿದುಕೊಂಡಿದ್ದಾರೆ. ಆದರೆ, ನಮ್ಮ ಕಷ್ಟ ನಮಗೆ ಗೊತ್ತು. ನನಗೆ ಒಬ್ಬನೆ ಮಗ, ಸತೀಶ ಅಣ್ಣನವರು ಅವರ ಮಗಳನ್ನು ಒಳ್ಳೆಯ ಹುಡುಗನಿಗೆ ಮದುವೆ ಮಾಡಿಕೊಟ್ಟು, ನೆಮ್ಮದಿಯಿಂದ ಇರುವಂತೆ ಮಾಡಬಹುದಿತ್ತು. ಹಗಲು ರಾತ್ರಿ ಎನ್ನದೇ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳಬೇಕಾಗುತ್ತದೆ. ಇನ್ನು ನಮ್ಮ ಮಕ್ಕಳು ವಿದೇಶದಲ್ಲೇ ಇರಬಹುದಾಗಿತ್ತು. ಇಲ್ಲವೇ ಆರು ತಿಂಗಳಿಗೊಮ್ಮೆ ವಿದೇಶಕ್ಕೆ ಪ್ರವಾಸಕ್ಕೆ ಹೋಗಬಹುದಿತ್ತು. ಆದರೆ, ಅದೆಲ್ಲವನ್ನು ತ್ಯಾಗ ಮಾಡಿ ನಮ್ಮಂತೆ ರಾಜಕಾರಣಕ್ಕೆ ಬಂದಿದ್ದಾರೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿನೇ ಅಲ್ಲ ಎಂಬ ಮಾಜಿ ಸಚಿವ ನಿರಾಣಿ ಹೇಳಿಕೆಗೆ ನನ್ನ ಮೈಯಲ್ಲಿ ರಾಣಿ ಚನ್ನಮ್ಮನ ರಕ್ತ ಹರಿಯುತ್ತಿದೆ. ನನ್ನ ಮಗನ ದೆಹದಲ್ಲಿ ಪಂಚಮಸಾಲಿ ರಕ್ತವಿದೆ. ಬಸವಣ್ಣನವರ ತತ್ವದಲ್ಲಿ ನಡೆಯುತ್ತಿದ್ದೇವೆ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಒಪ್ಪಿಕೊಂಡವರು. ನನ್ನ ಬಗ್ಗೆ ಈ ರೀತಿ ಮಾತಾಡುವವರ ಬುದ್ಧಿ ಭ್ರಮಣೆಯಾಗಿದೆ. ಪಂಚಮಸಾಲಿ ಹೋರಾಟದಲ್ಲಿ ನಾನು ಮತ್ತು ನನ್ನ ತಮ್ಮ ಮತ್ತು ಮಗ ಮುಂಚೂಣಿಯಲ್ಲಿದ್ದು ಹೋರಾಟ ಮಾಡಿದ್ದು ನಿರಾಣಿ ಅವರಿಗೆ ಗೊತ್ತಿಲ್ಲವೇ..? ಹಾಗಾಗಿ, ನಿರಾಣಿ ಅಣ್ಣನವರಿಗೆ ಯಾಕೋ ನಿರಾಸೆಯಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಸಣ್ಣ ವಯಸ್ಸಿನ ಅಭ್ಯರ್ಥಿ ಅಂತಾ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, 16ನೇ ವಯಸ್ಸಿನಲ್ಲಿ ಗಡಿ ಕಾಯಲು ಯುವಕರು ಸಂದರ್ಶನ ಕೊಡ್ತಾರೆ. ಈ ದೇಶ ಕಾಯಲು ಸುಭದ್ರತೆ ಕೊಡಲು ಸೈನಿಕರನ್ನು ತೆಗೆದುಕೊಳ್ಳುತ್ತೇವೆ. 18 ವಯಸ್ಸಿಗೆ ಮತದಾನದ ಹಕ್ಕು ಸಿಗುತ್ತದೆ. 29ನೇ ವರ್ಷಕ್ಕೆ ಯಾರಾದರೂ ಚಿಕ್ಕವನು ಎಂದರೆ ನಗ್ತಾರೆ. ಜನ ಬಹಳಷ್ಟು ಬುದ್ದಿವಂತರಿದ್ದು ಉತ್ತರ ಕೊಡ್ತಾರೆ. ಮುಂಬರುವ ದಿನಗಳಲ್ಲಿ ಹೊರಗಿನವರ ಎಫೆಕ್ಟ್ ಕಾಡುತ್ತದೆ. ಇದನ್ನ ನಾವು ಹೇಳ್ತಿಲ್ಲ ಅವರ ಪಕ್ಷದವರೇ ವಿರೋಧ ಮಾಡ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.