ಬೆಳಗಾವಿ: ಕಿತ್ತೂರನ್ನು ಉತ್ತರ ಕರ್ನಾಟಕದ ಪ್ರಸಿದ್ಧ, ಆಕರ್ಷಣೀಯ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಲು ಮತ್ತು ಕಿತ್ತೂರು ಇತಿಹಾಸವನ್ನು ಇಂದಿನ ಶೈಲಿಯಲ್ಲಿ ಅರ್ಥವಾಗುವ ರೀತಿಯಲ್ಲಿ ಹೇಳಲು ಥೀಮ್ ಪಾರ್ಕ್ ನಿರ್ಮಿಸಲಿದ್ದೇವೆ. ಕಿತ್ತೂರು ಉತ್ಸವದ ವೇಳೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಚನ್ನಮ್ಮನ ಕಿತ್ತೂರು ಕೋಟೆಯಲ್ಲಿ ಇಂದು 14.56 ಕೋಟಿ ರೂ. ವೆಚ್ಚದಲ್ಲಿ ಕೋಟೆ ಸಂರಕ್ಷಣಾ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ (ETV Bharat) 30 ಕೋಟಿ ರೂ. ಅನುದಾನದಲ್ಲಿ ಸುಂದರವಾದ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ. ಇಂದಿನ ವಿದ್ಯುನ್ಮಾನ ತಂತ್ರಜ್ಞಾನ ಬಳಸಿ ಕಿತ್ತೂರಿನ ಇತಿಹಾಸದ ಕಥೆ ಹೇಳಬೇಕಿದೆ. ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕಿದ್ದು, ಅನುದಾನ ಬಿಡುಗಡೆ ಮಾಡಿದ್ದೇವೆ. ಇದಕ್ಕಾಗಿ ಉತ್ಸವದ ವೇಳೆ ಭೂಮಿ ಪೂಜೆ ನೆರವೇರಿಸಲಿದ್ದೇವೆ ಎಂದರು.
ಇನ್ನು, 200ನೇ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ ಅನುದಾನ ನೀಡಿದ್ದೇವೆ. ಥೀಮ್ ಪಾರ್ಕ್‌ಗೆ 30 ಕೋಟಿ ರೂ, ಉತ್ಸವಕ್ಕೆ 5 ಕೋಟಿ ರೂ, 5 ಕೋಟಿ ರೂ ಇನ್ನಿತರ ಅಭಿವೃದ್ಧಿಗೆ ಹೀಗೆ ಒಟ್ಟು 58 ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.
ಈಗ ನಾವು ಕಿತ್ತೂರು ಕೋಟೆಗಿಂತ ದೊಡ್ಡ ದೊಡ್ಡ ಐಬಿಗಳನ್ನು ಕಟ್ಟಿದ್ದೇವೆ. ಆದರೆ ಅಲ್ಲಿ ಯಾರೂ ಇರುವುದಿಲ್ಲ. ಹೀಗಾಗಿ, ಕಿತ್ತೂರು ಕೋಟೆಯನ್ನು ಉಳಿಸಿಕೊಳ್ಳಬೇಕು. ಕೋಟೆಯ ಗೋಡೆಗಳನ್ನು ಹಳೆ ಶೈಲಿಯಲ್ಲಿ ರಿಪೇರಿ ಮಾಡಲಾಗುತ್ತದೆ. ಹಳೆ ಕಾಲದ ರೀತಿಯಲ್ಲಿ ಸುಣ್ಣದಿಂದಲೇ ಕಾಮಗಾರಿ ಮಾಡುತ್ತೇವೆ. ಇದಕ್ಕಾಗಿ 12 ಕೋಟಿ ರೂ. ಮಂಜೂರು ಮಾಡಿದ್ದೇವೆ. ಪ್ರಾಚೀನ ಕಾಲದ ಆಸ್ತಿಗಳನ್ನು ರಕ್ಷಣೆ ಮಾಡಬೇಕು. ಪುರಾತತ್ವ ಇಲಾಖೆಯ ನಿರ್ದೇಶನದಂತೆ ಕಾಮಗಾರಿ ನಡೆಯಲಿದೆ. ಮೂಲ ವಿನ್ಯಾಸ, ಆಕಾರ, ಸಂಪ್ರದಾಯ ಕೆಡಿಸಬಾರದು. ವಿಳಂಬವಾದರೂ ಪರವಾಗಿಲ್ಲ. ಆದರೆ ಪುರಾತ್ವ ಇಲಾಖೆಯಿಂದಲೇ ಕೆಲಸ ಆಗಬೇಕು ಎಂದು ಹೇಳಿದರು.
ಕೋಟೆ ಸಂರಕ್ಷಣಾ ಕಾಮಗಾರಿಗೆ ಶಂಕುಸ್ಥಾಪನೆ (ETV Bharat) ಅರಮನೆಯ ಮೂಲ ವಿನ್ಯಾಸ ನಮ್ಮ ಬಳಿ ಇಲ್ಲ: ಅರಮನೆಯ ಅವಶೇಷ ಮಾತ್ರ ಈಗ ಉಳಿದಿದೆ. ಅರಮನೆಯನ್ನು ಮರುನಿರ್ಮಾಣ ಮಾಡಬೇಕೆನ್ನುವ ಒತ್ತಾಯವಿದೆ. ಇದಕ್ಕೆ ಅನುದಾನದ ಕೊರತೆ ನಮಗೆ ಸಮಸ್ಯೆ ಅಲ್ಲ. ಆದರೆ ಅರಮನೆ ಮೂಲ ವಿನ್ಯಾಸ ನಮ್ಮ ಬಳಿ ಇಲ್ಲ. ಸರ್ಕಾರಿ ಐಬಿ ಥರ ಕಟ್ಟಿದರೆ ನಾವು ಕೋಟೆಗೆ ಅಪಮಾನ ಮಾಡಿದಂತಾಗುತ್ತದೆ. ಇದು ತರಾತುರಿಯಲ್ಲಿ ಆಗುವ ಕೆಲಸ ಅಲ್ಲ. ಅರಮನೆಯ ಅವಶೇಷಗಳ ಸಂರಕ್ಷಣೆಗೆ 2.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಮೈಸೂರು ದಸರಾ ಮಾದರಿಯಲ್ಲಿ ಕಿತ್ತೂರು ಉತ್ಸವಕ್ಕೆ ಪ್ರಾಧಾನ್ಯತೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ಬರೀ ಬಾಯಿ ಮಾತಿನಲ್ಲಿ ನಾವು ಹೇಳುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ಕಿತ್ತೂರಿಗೆ 60 ಕೋಟಿ ರೂ ಅನುದಾನ ನೀಡಿದ್ದೇವೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಬದ್ಧರಿದ್ದೇವೆ. ದಸರಾಗೆ ಅಲ್ಲಿ ಅನ್ವಯವಾಗುತ್ತದೆ. ಇಲ್ಲಿಗೆ ಅನ್ವಯವಾಗುವ ನಿಟ್ಟಿನಲ್ಲಿ ಏನಾದರೂ ಸಲಹೆ ಕೊಡಿ ಎಂದರು.
ಕಂದಾಯ ಸಚಿವ ಕೃಷ್ಣಬೈರೇಗೌಡ (ETV Bharat) ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಬರೀ ಗೊಂಬೆಗಳನ್ನು ನೋಡುವುದಲ್ಲ. ಕಿತ್ತೂರಿನಲ್ಲಿ ವಿಭಿನ್ನ ದೃಷ್ಟಿಕೋನದ ಮೂಲಕ ಥೀಮ್ ಪಾರ್ಕ್ ನಿರ್ಮಿಸುತ್ತೇವೆ. ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ಹಾಕಿದ್ದೇವೆ. ಕಿತ್ತೂರು ಸಂಸ್ಥಾನದ ಅವಶೇಷಗಳನ್ನು ಜೀರ್ಣೋದ್ಧಾರ ಮಾಡಬೇಕಿದೆ. ಒಟ್ಟಾರೆ ಕಿತ್ತೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದ್ದು, ಕಂದಾಯ ಸಚಿವರು ನಮಗಿಂತ ಎರಡು ಹೆಜ್ಜೆ ಮುಂದೆ ಹೋಗಿ ಯೋಜನೆ ರೂಪಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ :ಸಂಪುಟ ನಿರ್ಧಾರಕ್ಕೂ ಮುಡಾ ಕೇಸ್ಗೂ ಸಂಬಂಧ ಇಲ್ಲ: ಸಚಿವ ಕೃಷ್ಣ ಬೈರೇಗೌಡ - Minister Krishna Byregowda