ಕರ್ನಾಟಕ

karnataka

ETV Bharat / state

ಯಾವ ಪುರುಷಾರ್ಥಕ್ಕೆ ಪಾದಯಾತ್ರೆ?: ಸಚಿವ ಕೃಷ್ಣ ಬೈರೇಗೌಡ - Krishna Byregowda - KRISHNA BYREGOWDA

ಕೊಳ್ಳೇಗಾಲದ ನದಿಪಾತ್ರದ ಗ್ರಾಮಗಳಲ್ಲಿ ಮಳೆಹಾನಿ ವೀಕ್ಷಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯನ್ನು ಟೀಕಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ (ETV Bharat)

By ETV Bharat Karnataka Team

Published : Aug 2, 2024, 10:27 PM IST

Updated : Aug 2, 2024, 10:42 PM IST

ಸಚಿವ ಕೃಷ್ಣ ಬೈರೇಗೌಡ (ETV Bharat)

ಚಾಮರಾಜನಗರ: ಬಿಜೆಪಿ ಮತ್ತು ಜೆಡಿಎಸ್​ನವರು ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ?. ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಮುಚ್ಚಿಹಾಕಿ, ಜನರ ಗಮನ ಬೇರೆಡೆ ಸೆಳೆಯಲು ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದರು.

ಇಂದು ಕೊಳ್ಳೇಗಾಲದ ನದಿಪಾತ್ರದ ಗ್ರಾಮಗಳಲ್ಲಿ ಮಳೆಹಾನಿ ವೀಕ್ಷಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಮೇಕೆದಾಟು, ಕಳಸಾ ಬಂಡೂರಿ ಸೇರಿದಂತೆ ನೀರಾವರಿ ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ. ಲಿಂಗಾಯತ ನಾಯಕರನ್ನು ಮುಗಿಸಿರುವ ಪ್ರಲ್ಹಾದ್​ ಜೋಶಿಯವರು ಈಗ ಕುಮಾರಸ್ವಾಮಿಯವರನ್ನು ಮುಗಿಸಲು ಹೊರಟಿದ್ದಾರೆ. ಜೆಡಿಎಸ್‌ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುವುದು ಹಾಗೂ ಕುಮಾರಸ್ವಾಮಿ ಶಕ್ತಿ ಕುಂದಿಸುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವುದು ಇವರ ಉದ್ದೇಶ ಎಂದರು.

ಕರ್ನಾಟಕದ ಪರ ಧ್ವನಿ ಎತ್ತುತ್ತಿರುವ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಈ ಪಿತೂರಿ ನಡೆಸಿದೆ. ಸಿದ್ದರಾಮಯ್ಯ ಅವರು ಧೈರ್ಯವಾಗಿ ಕೇಂದ್ರ ಮಟ್ಟದಲ್ಲಿ ಕರ್ನಾಟಕದ ಪರ ಧ್ವನಿ ಎತ್ತುವ ಏಕೈಕ ನಾಯಕರಾದ ಕಾರಣ ಬಿಜೆಪಿ ಈ ಪಿತೂರಿ ನಡೆಸುತ್ತಿದೆ ಎಂದು ದೂರಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕನ್ನಡಿಗರ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಬಂದಿದ್ದಾರಾ?. ಕರ್ನಾಟಕ ಲೋಕಾಯುಕ್ತರು ಮತ್ತು ಎಸಿಬಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಅಭಿಯೋಜನಾ ಮಂಜೂರಾತಿ ಮಾಡಬೇಕೆಂದು ಪತ್ರ ಬರೆದಿದ್ದರು. ಆದರೆ, ಇದೆಲ್ಲವನ್ನೂ ರಾಜ್ಯಪಾಲರು ಕೆಳಕ್ಕೆ ಹಾಕಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದರು.

ಸುಪ್ರೀಂ ಕೋರ್ಟ್​ನಲ್ಲಿ ಜುಲ್ಮಾನೆಗೊಳಗಾದ ವ್ಯಕ್ತಿ ಕೊಟ್ಟ ಪತ್ರಕ್ಕೆ ರಾಜ್ಯಪಾಲರು ಸರ್ಕಾರಕ್ಕೆ ಕೆಲವೇ ಗಂಟೆಗಳಲ್ಲಿ ನೋಟಿಸ್ ಕೊಟ್ಟಿದ್ದಾರೆ. ಎಲ್ಲಿಂದಲೋ ಬಂದ ರಾಜ್ಯಪಾಲರು ಕನ್ನಡಿಗರು ಆರಿಸಿ, ಬಹುಮತ ಕೊಟ್ಟಿರುವ ಸರ್ಕಾರವನ್ನು ಬೀಳಿಸಲು ಬಂದಿದ್ದಾರೆ, ರಾಜ್ಯಪಾಲರು ಏನು ರಾಜಕೀಯ ಏಜೆಂಟಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಭ್ರಷ್ಟಾಚಾರಿಗಳಿಂದ, ಭ್ರಷ್ಟಾಚಾರಕ್ಕೋಸ್ಕರ, ಭ್ರಷ್ಟಾಚಾರಿಗಳೇ ಹಮ್ಮಿಕೊಂಡ ಪಾದಯಾತ್ರೆ: ಡಿ.ಕೆ.ಶಿವಕುಮಾರ್​ - D K Shivakumar

Last Updated : Aug 2, 2024, 10:42 PM IST

ABOUT THE AUTHOR

...view details