ಬೆಂಗಳೂರು : ಪ್ರಸಕ್ತ ಆರ್ಥಿಕ ವರ್ಷದಲ್ಲಿ 25 ಸಾವಿರ ಕೋಟಿ ರೂ. ಗಳ ಅಲ್ಪಾವಧಿ ಸಾಲ ನೀಡುವ ಗುರಿ ಹೊಂದಿದ್ದೇವೆ ಎಂದು ಸಹಕಾರ ಸಚಿವ ಕೆ. ಎನ್ ರಾಜಣ್ಣ ಸದನಕ್ಕೆ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ರೈತರ ಅಲ್ಪಾವಧಿ ಸಾಲದ ಮೊತ್ತ ಏರಿಕೆ ಹಾಗೂ ಶೂನ್ಯ ಬಡ್ಡಿಯಲ್ಲಿ ವಿತರಣೆಯಾಗಿರುವುದರ ಬಗ್ಗೆ ಕಾಂಗ್ರೆಸ್ ಶಾಸಕ ದಿನೇಶ್ ಗೂಳಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರ್ಜಿ ಹಾಕಿದ ಎಲ್ಲ ರೈತರಿಗೆ ಸಾಲ ಕೊಡಲಾಗುವುದಿಲ್ಲ. ರೈತರ ಭೂಮಿ ಹಾಗೂ ಬೆಳೆ ಆಧಾರದ ಮೇಲೆ ಸಾಲ ವಿತರಣೆ ಮಾಡಲಾಗುತ್ತದೆ. ಹಿಂದಿನಿಂದಲೂ ಈ ಕ್ರಮವನ್ನ ಅನುಸರಿಸಿಕೊಂಡು ಬರಲಾಗುತ್ತಿದೆ. ಕಳೆದ ಸಾಲಿನಲ್ಲಿ 22,982.10 ಕೋಟಿ ಬೆಳೆ ಸಾಲ ನೀಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 35.10 ಲಕ್ಷ ರೈತರಿಗೆ 25 ಸಾವಿರ ಕೋಟಿ ಅಲ್ಪಾವಧಿ ಸಾಲ ನೀಡುವ ಗುರಿ ಹೊಂದಿದ್ದೇವೆ. ಈವರೆಗೆ 6799.17 ಕೋಟಿ ಬೆಳೆ ಸಾಲ ವಿತರಿಸಲಾಗಿದೆ ಎಂದರು.
ಹಾಲಿನ ಪ್ರೋತ್ಸಾಹಧನ ಶೀಘ್ರ ಬಿಡುಗಡೆ : ಹಾಲಿನ ಪ್ರೋತ್ಸಾಹಧನ ಬಾಕಿ ಇದ್ದು, ಆದಷ್ಟು ಬೇಗ ಬಾಕಿ ಇರುವ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಕೆ. ಎನ್ ರಾಜಣ್ಣ ಭರವಸೆ ನೀಡಿದ್ದಾರೆ.