ಬೆಳಗಾವಿ:ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ಕಾವು ಏರುತ್ತಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಲೆ ಕಾಣುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ವಿಶ್ವಾಸದಿಂದ ಚುನಾವಣೆ ಮಾಡುತ್ತಿದ್ದು, ಅಭ್ಯರ್ಥಿಗಳ ಗೆಲುವಿನ ಬಗ್ಗೆ ವಿಶ್ವಾಸ ಮತ್ತು ನಂಬಿಕೆ ಹೊಂದಿದ್ದಾರೆ. ಹಾಗಾಗಿ, ಮೂರು ಕಡೆ ನಾವು ಗೆಲ್ಲುತ್ತೇವೆ ಎಂದು ಸಚಿವ ಹೆಚ್. ಕೆ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿನ್ನೆ ನಾನು ಶಿಗ್ಗಾಂವಿಯಲ್ಲಿ ಪ್ರಚಾರ ಮಾಡಿದ್ದೇನೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು ಕೂಡ ಬಂದಿದ್ದರು. ಈ ವೇಳೆ ಮೂರು ನಾಲ್ಕು ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದು, ನಮ್ಮ ಪರ ಒಳ್ಳೆಯ ವಾತಾವರಣ ಕಂಡು ಬಂದಿದೆ ಎಂದು ಹೇಳಿದರು.
ಸಿದ್ದರಾಮಯ್ಯ ನಾಯಕತ್ವಕ್ಕೆ ಜನ ಬೆಂಬಲಿಸಲಿದ್ದಾರೆ: ಬಿಜೆಪಿಯವರು ಸಾಕಷ್ಟು ಸುಳ್ಳು ಪ್ರಚಾರ ಪ್ರಾರಂಭಿಸಿದ್ದಾರೆ. ವಕ್ಫ್ ಹೆಸರಲ್ಲಿ ಧರ್ಮ- ಧರ್ಮಗಳು ಹಾಗೂ ಜಾತಿ-ಜಾತಿಗಳ ನಡುವೆ ದ್ವೇಷದ ಭಾವನೆ ಹುಟ್ಟಿಸುತ್ತಿದ್ದಾರೆ. ಆದರೆ, ಅವರ ಸುಳ್ಳು ಪ್ರಚಾರಕ್ಕೆ ಯಾರೂ ಮಣೆ ಹಾಕುವುದಿಲ್ಲ. ಅಲ್ಲದೇ ಬಿಜೆಪಿ ಪ್ರಚಾರ ನೀತಿಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ, ಮೂರು ಕಡೆ ಗೆಲ್ಲುವ ಮೂಲಕ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಕರ್ನಾಟಕ ಜನ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿಯವರೇ ಉತ್ತರಿಸಬೇಕಾಗುತ್ತದೆ: ರಾಜ್ಯಕ್ಕೆ ಜೆಪಿಸಿ ಕಮಿಟಿ ಅವರು ಬಂದಿಲ್ಲ. ಜೆಪಿಸಿ ಅಧ್ಯಕ್ಷರು ಅನಧಿಕೃತವಾಗಿ ಬಂದಂತೆ ಕಾಣಿಸುತ್ತದೆ. ಯಾವ ಕಾರಣಕ್ಕೆ ನೀವು ಬಂದಿರಿ? ಏನು ಮಾಹಿತಿ ನಿಮಗೆ ಬೇಕಿತ್ತು? ಜನರ ಅಹವಾಲು ಸ್ವೀಕರಿಸಲು ನಿಮ್ಮ ಸಮಿತಿ ಬರಬೇಕಿತ್ತು. ಉಪಚುನಾವಣೆ ಸಂದರ್ಭದಲ್ಲಿ ನಾಟಕವಾಡಲು ನೀವು ಬರೋದಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ. ಕೇಂದ್ರ ಸರ್ಕಾರ ಸಿಬಿಐ, ಇಡಿ, ಐಟಿ ದುರುಪಯೋಗ ಪಡಿಸಿಕೊಂಡಿದ್ದೀರಿ. ಈಗ ಜೆಪಿಸಿ ದುರುಪಯೋಗ ಪಡಿಸಿಕೊಳ್ಳಲು ಶುರು ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ ಹೆಚ್. ಕೆ ಪಾಟೀಲ್, ಇದಕ್ಕೆ ಪ್ರಧಾನಿ ಮೋದಿಯವರೇ ಉತ್ತರಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.