ಬೆಂಗಳೂರು: "ವೇರ್ ಈಸ್ ಮನಿ ಲಾಡ್ರಿಂಗ್?. ಕಾನೂನನ್ನು ಮನಸ್ಸಿಗೆ ಬಂದಂತೆ ಮಾಡಿಕೊಂಡರೆ ಹೇಗೆ" ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪ್ರಶ್ನಿಸಿದರು. ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿಎಂ ಬಡವರ ಪರ ಚಿಂತನೆ ಇಟ್ಟುಕೊಂಡಿದ್ದರು. ಅನ್ನಭಾಗ್ಯ ಸೇರಿ ಹಲವು ಕಾರ್ಯಕ್ರಮಗಳನ್ನು ಕೊಟ್ಟರು. ಬಡವರನ್ನು ಬಡತನ ರೇಖೆಗಿಂತ ಮೇಲೆ ತಂದರು. ಇದನ್ನು ಪ್ರತಿಪಕ್ಷಗಳಿಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ" ಎಂದರು.
"ರಾಜಭವನವನ್ನೂ ದುರುಪಯೋಗ ಮಾಡಿಕೊಂಡರು. ಇ.ಡಿಯಲ್ಲಿ ಪ್ರಕರಣ ದಾಖಲಾದ ಮೇಲೆ ಸಿಎಂ ಭೇಟಿ ಮಾಡಿಲ್ಲ. ಇಂದು ಮಧ್ಯಾಹ್ನ ಸಿಎಂ ಭೇಟಿ ಮಾಡ್ತೇನೆ. ಕಾನೂನು ಹೋರಾಟ ಮಾಡಬೇಕಾಗುತ್ತದೆ. ಸಂವಿಧಾನದಲ್ಲೂ ಅದಕ್ಕೆ ಅವಕಾಶಗಳಿವೆ" ಎಂದು ಹೇಳಿದರು.
ಮುಡಾ ನಿವೇಶನ ವಾಪಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಸಿಎಂ ಧರ್ಮಪತ್ನಿ ಮುಡಾಗೆ ಪತ್ರದ ಮೂಲಕ ಸೈಟ್ ವಾಪಸ್ ಮಾಡಿದ್ದಾರೆ. ಅವರ ಪತ್ರದ ವಿವರಗಳನ್ನು ನೋಡಿ, ಒಬ್ಬ ಗೃಹಿಣಿಗೆ ಮಾನಸಿಕ ಆಘಾತ ಆಗಿದೆ ಎಂದು ಗೊತ್ತಾಗುತ್ತೆ. ದುರುದ್ದೇಶ, ಗೂಬೆ ಕೂರಿಸುವ ಪ್ರಯತ್ನವಿದು. ಈ ಬಗ್ಗೆ ಅವರು ಪತ್ರದ ಮೂಲಕ ಹೇಳಿದ್ದಾರೆ. ಅಪಪ್ರಚಾರ, ರಾಜಕೀಯ ದುರುದ್ದೇಶ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಅವರ ಸ್ಪಂದನೆ ಮೆಚ್ಚುವಂಥದ್ದು. ಸೂಕ್ತ ನಿರ್ಣಯ ತೆಗೆದುಕೊಂಡಿದ್ದಾರೆ. ಇದೀಗ ಸೈಟ್ ಪಡೆದರು ಅನ್ನೋದಕ್ಕೆ ಪೂರ್ಣ ವಿರಾಮ ಬಿದ್ದಿದೆ" ಎಂದು ತಿಳಿಸಿದರು.