ಕರ್ನಾಟಕ

karnataka

ETV Bharat / state

ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಹಾಕಿದ ಪೊಲೀಸ್ ಸಿಬ್ಬಂದಿ: ಸಚಿವ ಹೆಚ್.ಕೆ.ಪಾಟೀಲ್​ ಪ್ರತಿಕ್ರಿಯೆ ಹೀಗಿದೆ

ಅಂತರ್‌ಜಿಲ್ಲಾ ವರ್ಗಾವಣೆ ಮಾಡದ್ದಕ್ಕೆ ಬೇಸರಗೊಂಡು ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಕಾನೂನು ಸಚಿವ ಹೆಚ್‌.ಕೆ.ಪಾಟೀಲ್ ಪ್ರತಿಕ್ರಿಯಿಸಿದರು.

Minister H.K.Patil
ಹೆಚ್.ಕೆ. ಪಾಟೀಲ್​

By ETV Bharat Karnataka Team

Published : Feb 25, 2024, 8:28 AM IST

ಬಾಗಲಕೋಟೆ: "ಅಂತರ್‌ಜಿಲ್ಲಾ ವರ್ಗಾವಣೆ ಮಾಡದೇ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿಗೆ ದಯಾಮರಣ ಅರ್ಜಿ ಹಾಕಿರುವ ವಿಚಾರ ನನಗೆ ಗೊತ್ತಿಲ್ಲ. ವರ್ಗಾವಣೆಗಾಗಿ ದಯಾಮರಣ ಅಂದರೆ ನಗಬೇಕಷ್ಟೇ" ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್‌.ಕೆ.ಪಾಟೀಲ್ ಹೇಳಿದರು.

ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಚಿವರು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, "ಅದಕ್ಕೇಕೆ ರಾಷ್ಟ್ರಪತಿಗೆ ದಯಾಮರಣ ಅರ್ಜಿ ಬರೀಬೇಕು?. ಅವರು ಗೃಹಮಂತ್ರಿಗಳ ಕಡೆ ಹೋದರೆ ವರ್ಗಾವಣೆ ಕೆಲಸ ಆಗುತ್ತದಲ್ಲಾ?. ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಅಧಿವೇಶನದಲ್ಲೂ ಯಾರೂ ಪ್ರಸ್ತಾಪ ಮಾಡಿಲ್ಲ. ಪ್ರಚಾರಕ್ಕೆ ಹೀಗೆ ಮಾಡಿರಬಹುದು" ಎಂದರು.

ಇದೇ ವೇಳೆ, ಸಿಎಂ ವಿರುದ್ಧ ಸಂಸದ ಅನಂತ್‌ ಕುಮಾರ್​​ ಹೆಗಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, "ಯಾವುದೇ ಶಾಸಕರು ಪಗಾರ ಇಲ್ಲದೇ ಇದ್ದಾರಾ ಹೇಳಿ?. ನನ್ನ ಜೊತೆಯಲ್ಲೇ ಶಾಸಕರು, ಮಾಜಿ ಶಾಸಕರಿದ್ದಾರೆ, ಅವರೊಂದಿಗೆ ಕೇಳಿ. ಅವರಿಗೂ ಪ್ರತಿ ತಿಂಗಳು ಪಿಂಚಣಿ ಕೊಡುತ್ತೇವೆ. ಬಡ ಜನತೆಗೆ ಎರಡು ಸಾವಿರದಂತೆ 2 ಮತ್ತು 5ನೇ ತಾರೀಖಿಗೆ ಹಣ ಬರುತ್ತಿದೆ. ಬಿಜೆಪಿಗೆ ಅದನ್ನು ಸಹಿಸಲು ಆಗುತ್ತಿಲ್ಲ" ಎಂದು ಹೇಳಿದರು.

"ಸಿಎಂಗೆ ಸಿದ್ದರಾಮುಲ್ಲಾ ಖಾನ್ ಎಂಬ ಪದ ಬಳಸಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇದು ಅತ್ಯಂತ ದುರ್ದೈವ. ಸಾರ್ವಜನಿಕ ಬದುಕಿನಲ್ಲಿ ಇರುವವರು ಈ ರೀತಿಯ ಭಾಷೆ ಬಳಸಬಾರದು. ನಾವು ಸಮಾಜವನ್ನು ಸುಧಾರಣೆಯತ್ತ ಒಯ್ಯಬೇಕೇ ಹೊರತು ಅಗೌರವದ ವಾತಾವರಣ ಸೃಷ್ಠಿ ಮಾಡಿದರೆ ಅದು ನಿಮ್ಮ ಮೈಮೇಲೆಯೇ ಬರುತ್ತದೆ ಎನ್ನುವ ಎಚ್ಚರಿಕೆ ಇರಲಿ" ಎಂದು ತಿಳಿಸಿದರು.

ಮುಂದುವರೆದು ಮಾತನಾಡಿ, ದೆಹಲಿಯಲ್ಲಿ ರೈತರ ಹೋರಾಟ ಮತ್ತು ಸಾವಿನ ವಿಚಾರಕ್ಕೆ, "ಕಳೆದ ಹತ್ತು ವರ್ಷದಲ್ಲಿ ರೈತರ ಬಗ್ಗೆ ಅಲಕ್ಷ್ಯ ಮಾಡಿದ್ದಾರೆ. ಆರ್ಥಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದ ಸರ್ಕಾರ ಇವತ್ತು ಏನು ಮಾಡಿದೆ?. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವ ವ್ಯವಸ್ಥೆ ತನ್ನಿ‌. ಸ್ವಾಮಿನಾಥನ್ ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ ಕೊಟ್ಟರು. ಅವರನ್ನು ಹೊಗಳಿ, ಕೊಂಡಾಡಿರುವ ಬಿಜೆಪಿ ಮುಖಂಡರಿಗೆ ರೈತರ ಬಗ್ಗೆ ಎಲ್ಲಿದೆ ಕಳಕಳಿ?. ಸ್ವಾಮಿನಾಥನ್​​ ಅವರ ಹೇಳಿಕೆಯ ಸಮೀಪವಾದರೂ ಬರಬೇಕಲ್ಲಾ?. ಈ ಕಾರಣಕ್ಕೆ ವಿಧಾನಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಂಡಿದ್ದೇವೆ" ಎಂದು ತಿಳಿಸಿದರು.

"ಕೇಂದ್ರ ಸರ್ಕಾರ ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಕನಿಷ್ಠ ಪ್ರೋತ್ಸಾಹಧನವಾದರೂ ಕೊಡಬೇಕು‌. ಶಾಸನಬದ್ಧ ರೂಪ ಸಿಗಬೇಕು. ಇಂಥ ನಿರ್ಧಾರ ತೆಗೆದುಕೊಳ್ಳಬೇಕೆಂದು ವಿಧಾನಸಭೆಯಲ್ಲಿ ಆಗ್ರಹಿಸಿದ್ದೇವೆ" ಎಂದು ಹೇಳಿದರು.

ದೆಹಲಿ ಹೋರಾಟದಲ್ಲಿ ಭಾಗಿಯಾದವರು 'ನಕಲಿ ರೈತರು' ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಪ್ರತಿಕ್ರಿಯಿಸಿ, "ಅವರಿಗೆ ರೈತರು ಅಂದರೇನೇ ಗೊತ್ತಿಲ್ಲ ಎಂದ ಹಾಗಾಯ್ತು. ಇಂಥವರಿಗೆ ಏನು ಹೇಳಲು ಸಾಧ್ಯ?, ಅಲ್ಲಿರುವವರು ಯಾರು, ಅವರು ನಕಲಿ ರೈತರಾ‌? ಯಾವ ಸಂಘಟನೆಯವರು ಹೋಗಿದ್ದಾರೆ?. ಕಾಂಗ್ರೆಸ್​ ಕಾರ್ಯಕರ್ತರು ಅಲ್ಲಿ ನಿಂತಿದ್ದಾರಾ? ಹಳ್ಳಿಹಳ್ಳಿಯಿಂದ ಬರುವ ಜನ ರೈತರಲ್ಲವೇ" ಎಂದು ಪ್ರಶ್ನಿಸಿದರು.

ಇನ್ನು, ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಕುರಿತು ಮಾತನಾಡುತ್ತಾ, ಮುಂದಿನ ಹದಿನೈದು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಹೂರಬೀಳುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಅಭಿವೃದ್ಧಿಗೆ ಹಣವಿಲ್ಲ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details