ಬೆಂಗಳೂರು:ಬೆಂಗಳೂರು ಕಣ್ಣೂರು ರೈಲನ್ನು ಕ್ಯಾಲಿಕಟ್ಗೆ (ಕೋಯಿಕ್ಕೋಡ್) ವಿಸ್ತರಣೆ ಮಾಡಿರುವ ರೈಲ್ವೇ ಸಚಿವಾಲಯದ ನಿರ್ಧಾರವನ್ನು ಮರುಪರಿಶೀಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಈ ಕುರಿತಂತೆ ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿರುವ ಸಚಿವರು, ಕರಾವಳಿ ಪ್ರಯಾಣಿಕರಿಗೆ ಈ ವಿಸ್ತರಣೆಯಿಂದ ತೊಂದರೆ ಉಂಟಾಗಲಿದೆ ಎಂದು ಉಲ್ಲೇಖಿಸಿದ್ದಾರೆ. ಬೆಂಗಳೂರು ಮತ್ತು ಕಣ್ಣೂರು ರೈಲು ಸಂಖ್ಯೆ 16511 ಮತ್ತು 16512 ಅನ್ನು ಕೇರಳದ ಕೋಯಿಕ್ಕೋಡ್ವರೆಗೆ ರೈಲ್ವೇ ಸಚಿವಾಲಯ ವಿಸ್ತರಿಸಿದೆ. ಆದರೆ, ಇದರಿಂದ ಸಾವಿರಾರು ಪ್ರಯಾಣಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ರಾತ್ರಿ ಸಂಚರಿಸುವ ಈ ಎಕ್ಸ್‌ಪ್ರೆಸ್ ರೈಲಿಗೆ ಸಾರ್ವಜನಿಕರಿಂದ ಹೆಚ್ಚು ಬೇಡಿಕೆಯಿದ್ದು, ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಕಣ್ಣೂರು ನಡುವೆ ಇರುವ ಏಕೈಕ ರೈಲು ಸೇವೆಯಾಗಿದೆ. ವಿಸ್ತರಣೆಯಿಂದ ಸೀಟುಗಳಿಗೆ ಇನ್ನಷ್ಟು ಬೇಡಿಕೆ ಹೆಚ್ಚಾಗಲಿದ್ದು, ಇದರಿಂದ ಮಂಗಳೂರು ಸೇರಿದಂತೆ ಕರಾವಳಿ ಭಾಗದ ಜನರಿಗೆ ಸಮಸ್ಯೆ ಉಂಟಾಗಲಿದೆ. ಸೀಟುಗಳ ಸಂಖ್ಯೆ ಹೆಚ್ಚಿಸದೇ ವಿಸ್ತರಣೆ ಮಾಡಿರುವುದರಲ್ಲಿ ಅರ್ಥವಿಲ್ಲ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಲಸ್ಸೆರಿ, ವಡಕರ ಮತ್ತು ಕ್ವಿಲಾಂಡಿ ಎಂಬ ಮೂರು ನಿಲ್ದಾಣಗಳನ್ನು ಕಣ್ಣೂರು ಮತ್ತು ಕೋಯಿಕ್ಕೋಡ್ ನಡುವೆ ಸೇರಿಸಲಾಗಿದೆ. ಈ ವಿಸ್ತರಣೆಯಿಂದಾಗಿ, ರೈಲು ಸಂಖ್ಯೆ 16512ರಲ್ಲಿ ಕಾಯ್ದಿರಿಸದ ಕೋಚ್‌ಗಳು ಕಣ್ಣೂರು ಮತ್ತು ಕೋಯಿಕ್ಕೋಡ್ ನಡುವಿನ ಪ್ರಯಾಣಿಕರಿಂದ ತುಂಬಲ್ಪಡುತ್ತವೆ. ಅದರಂತೆ, ಕೋಯಿಕ್ಕೋಡ್ ಪ್ರಸ್ತುತ ರೈಲು ಸಂಪರ್ಕದಿಂದ ಉತ್ತಮ ಸೇವೆಯನ್ನು ಹೊಂದಿದೆ. ರೈಲು ಸಂಖ್ಯೆ 16526/527 ಪ್ರತಿದಿನ ಕೋಯಿಕ್ಕೋಡ್ನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ರೈಲು ಸಂಖ್ಯೆ 16566/567 ಕೋಯಿಕ್ಕೋಡ್ನಿಂದ ಬೆಂಗಳೂರಿಗೆ ವಾರಕ್ಕೊಮ್ಮೆ ಶೋರನೂರು, ಪಾಲಕ್ಕಾಡ್ ಮತ್ತು ಕೊಯಮತ್ತೂರು ಮೂಲಕ ಸಂಪರ್ಕಿಸುತ್ತದೆ. ಈ ರೈಲುಗಳಿಗೆ ಬೇಡಿಕೆ ಹೆಚ್ಚಿದ್ದು, ಕೇರಳದಿಂದ ನಿರಂತರವಾಗಿ ಓಡಾಡುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.