ಮಂಡ್ಯ : ಹಾಸನ ಪೆನ್‌ಡ್ರೈವ್ ಪ್ರಕರಣ ಸಮಾಜ ತಲೆ ತಗ್ಗಿಸುವ ವಿಚಾರ. ಈ ಪ್ರಕರಣವನ್ನು ಡೈವರ್ಟ್ ಮಾಡಲು ಜೆಡಿಎಸ್ ಅವರು ಏನೇನೋ ಮಾತಾಡುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಮಂಡ್ಯದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈ ಬಗ್ಗೆ ಚರ್ಚೆ ಮಾಡಲ್ಲ ಅಂತಾ ಹೇಳಿದ್ದೇನೆ. ವಾಟ್ಸ್ಆ್ಯಪ್ನಲ್ಲಿ ಜೈ ಜೆಡಿಎಸ್, ಜೈ ಕುಮಾರಣ್ಣ, ಜೈ ರೇವಣ್ಣ, ಜೈ ಪ್ರಜ್ವಲ್ ಅಂತಾರೆ. ಇದನ್ನು ನೋಡಿದಾಗ ಏನನ್ನು ಹೇಳೋದು. ಸಮಾಜ ತಲೆ ತಗ್ಗಿಸುವ ವಿಚಾರ ಇದು. ಈ ಪ್ರಕರಣವನ್ನು ಡೈವರ್ಟ್ ಮಾಡಲು ಜೆಡಿಎಸ್ ಅವರು ಮಾತಾಡುತ್ತಾರೆ. ಒಬ್ಬ ಹೆಣ್ಣು ಮಗಳನ್ನು ಬಳಸಿಕೊಂಡು ಈ ರೀತಿ ಮಾಡಿದರೆ ಎಲ್ಲಾ ಕಡೆ ಪ್ರಭಾವ ಬೀರುತ್ತೆ. ಕುಟುಂಬ ಸೇರಿದಂತೆ ಸುತ್ತಮುತ್ತಲಿನ ವಾತಾವರಣದ ಮೇಲೂ ಪ್ರಭಾವ ಬೀರುತ್ತೆ. ಕಾನೂನು ಬದ್ಧವಾಗಿ ಏನು ಆಗುತ್ತೆ ನೋಡೋಣ ಎಂದರು.
ನ್ಯಾಯಾಲಯಕ್ಕೆ ಎಲ್ಲರೂ ಸಹ ತಲೆಬಾಗಬೇಕಾಗುತ್ತದೆ. ನಮ್ಮ ಸರ್ಕಾರದಿಂದ ಪಕ್ಷಪಾತವಿಲ್ಲದೇ ತನಿಖೆ ಮಾಡಲಾಗುತ್ತೆ. ಎಸ್‌ಐಟಿ ತನಿಖೆ ಮಾಡಿ ನ್ಯಾಯಾಲಯಕ್ಕೆ ನೀಡುತ್ತೆ. ನ್ಯಾಯಾಲಯದ ಮುಂದೆ ಎಲ್ಲವೂ ಇದೆ. ಕುಮಾರಸ್ವಾಮಿಗೆ ಯಾರ ಮೇಲೂ ನಂಬಿಕೆ ಇಲ್ಲ. ಮೋದಿ ಅವರನ್ನೇ ಹೀಯಾಳಿಸಿ ಬೈದಿದ್ದಾರೆ. ಆರ್‌ಎಸ್‌ಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲರಿಗೂ ಬೈದಿದ್ದಾರೆ. ಕುಮಾರಸ್ವಾಮಿ ಯಾರನ್ನು ಅನುಮಾನದಲ್ಲಿ ನೋಡಿಲ್ಲ ಎಂದರೆ ಹೇಳಲಿ ಎಂದು ಹೆಚ್ಡಿಕೆ ವಿರುದ್ದ ವಾಗ್ದಾಳಿ ನಡೆಸಿದರು.
ಅವರು ಒನ್ ನೇಷನ್ ಒನ್ ಎಲೆಕ್ಷನ್ ಆದ್ರೆ ಒಳ್ಳೆಯದು. ಈ ಬಗ್ಗೆ ಮನಮೋಹನ್ ಸಿಂಗ್ ಕಾಲದಿಂದ ಚರ್ಚೆ ಆಗ್ತಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ನಮ್ಮ ಪಕ್ಷದ ಅಭ್ಯರ್ಥಿ. ಜೆಡಿಎಸ್ ಚುನಾವಣೆಗೆ ಮುಂಚಿತವಾದ ಅಲೈಯನ್ಸ್ ಇದೇ ಮೊದಲ ಬಾರಿಗೆ ಆಗಿದೆ. ಲೋಕಸಭಾ ಚುನಾವಣೆ ಮೂಲಕ ಫಸ್ಟ್ ಅಲೈಯನ್ಸ್ ಆಗಿದೆ. ಅಲೈಯನ್ಸ್ಗೆ ವಿರುದ್ಧವಾಗಿ ಬೆಂಗಳೂರು, ರಾಮನಗರ ಮತದಾರರು ಮತ ನೀಡಿದ್ರು. ಅದು ಪುಟ್ಟಣ್ಣರ ಗೆಲುವಿನಿಂದ ಸಾಬೀತಾಯಿತು. ಅಲೈಯನ್ಸ್ ಬಗ್ಗೆ ಹೆಚ್ಡಿಕೆಯೇ ಅಪಸ್ವರ ಎತ್ತಿದ್ದರು. ಆನಂತರ ಬಿಜೆಪಿ - ಜೆಡಿಎಸ್ ಒಲ್ಲದ ಮನಸ್ಸಿನಿಂದ ಸಂಬಂಧ ಮುಂದುವರೆಸಿವೆ ಎಂದರು.