ರಣ ಬಿಸಿಲಲ್ಲೂ ಬೆಮುಲ್ ಕ್ಷೀರ ಕ್ರಾಂತಿ ಬೆಳಗಾವಿ: ಭೀಕರ ಬರಗಾಲ ಮತ್ತು ಉರಿ ಬಿಸಿಲಿನಿಂದ ಮೇವು ಮತ್ತು ನೀರಿನ ಹಾಹಾಕಾರ ಉಂಟಾಗಿ ರೈತರು ಹೈನುಗಾರಿಕೆ ಮಾಡಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲೂ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು-ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್)ದಲ್ಲಿ ಹಾಲು ಸಂಗ್ರಹ ಪ್ರಮಾಣ ಕಳೆದ ವರ್ಷಕ್ಕಿಂತ ಶೇ.20ರಷ್ಟು ಹೆಚ್ಚಾಗಿದ್ದು, ದಾಖಲೆಯೇ ಸರಿ.
2023 ಮಾರ್ಚ್‌ನಲ್ಲಿ ಪ್ರತಿದಿನ 1.61 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರತಿದಿನ 1.91 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದ್ದು, ರಣ ಬಿಸಿಲಿನ ನಡುವೆಯೂ 30 ಸಾವಿರ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ.
ಬೆಳಗಾವಿ ಹಾಗೂ ರಾಯಬಾಗ ತಾಲೂಕುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹವಾಗುತ್ತಿದ್ದು, ಕಳೆದ ವರ್ಷ ಜಿಲ್ಲೆಯಲ್ಲಿ ಒಕ್ಕೂಟಕ್ಕೆ 29 ಸಾವಿರ ಹಾಲು ನೀಡುವ ಸದಸ್ಯರಿದ್ದರು. ಪ್ರಸಕ್ತ ಸದಸ್ಯರ ಸಂಖ್ಯೆ 33 ಸಾವಿರಕ್ಕೇರಿದೆ. ಖಾಸಗಿ ಹಾಲಿನ ಡೇರಿಗಳು ನಷ್ಟದಲ್ಲಿದ್ದು, ರೈತರಿಂದ ಹಾಲು ಶೇಖರಣೆ ಮಾಡುತ್ತಿಲ್ಲ. ಶೇಖರಣೆ ಮಾಡಿದರೂ ಸರಿಯಾಗಿ ಹಣ ಸಂದಾಯ ಮಾಡುತ್ತಿಲ್ಲ. ಹೀಗಾಗಿ ರೈತರು ಬೆಮುಲ್‌ಗೆ ಹಾಲು ನೀಡುತ್ತಿರುವುದರಿಂದ ಹಾಲು ಶೇಖರಣೆ ಪ್ರಮಾಣ ಹೆಚ್ಚಾಗಿದೆ. ಬೆಮುಲ್‌ನಲ್ಲಿ ಸಂಗ್ರಹವಾಗುತ್ತಿರುವ ಹೆಚ್ಚಿನ ಪ್ರಮಾಣದ ಹಾಲು ಶೇ.93ರಷ್ಟು ಗುಣಮಟ್ಟದ್ದಾಗಿದೆ. ಹೀಗಾಗಿ ಪ್ರತಿದಿನ ಗುಣಮಟ್ಟದ ಹಾಲು ನೀಡುತ್ತಿರುವ ಒಕ್ಕೂಟದ ಸದಸ್ಯರಿಗೆ ಸರ್ಕಾರದಿಂದ 2.5 ಕೋಟಿ ರೂ. ಪ್ರೋತ್ಸಾಹ ಧನ ಕೊಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಹಾಲು ನೀಡುವ ಹಸುಗಳ ಸಂಖ್ಯೆ ಅಷ್ಟೇನು ಕಡಿಮೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಜಿಲ್ಲಾ ಸಹಕಾರಿ ಹಾಲು-ಉತ್ಪಾದಕರ ಸಂಘಗಳ ಒಕ್ಕೂಟವು ಪ್ರತಿದಿನ 5 ಲಕ್ಷ ಲೀಟರ್ ಹಾಲು ಸಂಗ್ರಹ ಗುರಿ ಹಾಕಿಕೊಂಡಿದೆ. ಇದಕ್ಕೆ ತಕ್ಕಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೆಚ್ಚಿಸುವ ಯೋಜನೆ ಇದೆ. ಸದ್ಯ 650 ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಇವುಗಳನ್ನು 1 ಸಾವಿರಕ್ಕೇರಿಸುವ ಗುರಿ ಹಾಕಿಕೊಳ್ಳಲಾಗಿದೆ. ಮಾರುಕಟ್ಟೆ ಸುಧಾರಣೆಯ ಹಲವು ಯೋಜನೆಗಳೂ ಒಕ್ಕೂಟದ ಮುಂದಿದೆ. ಪ್ರಸ್ತುತ ಬರಗಾಲ ಇರುವ ಹಿನ್ನೆಲೆಯಲ್ಲಿ 2 ಸಾವಿರ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 600ಎಕರೆ ಪ್ರದೇಶದಲ್ಲಿ ಹಸಿ ಮೇವು ಬೆಳೆಯಲು ಕೇಂದ್ರ ಸರ್ಕಾರದ ಯೋಜನೆಯಡಿ ಉಚಿತವಾಗಿ ಬೀಜಗಳನ್ನು ವಿತರಿಸಲು ಯೋಜನೆ ಹಾಕಿಕೊಂಡಿದ್ದೇವೆ".
"ಪ್ರತಿ ವರ್ಷದಂತೆ ಜೂನ್, ಮೇ ತಿಂಗಳಲ್ಲಿ 150 ಕ್ವಿಂಟಾಲ್ ಆಫ್ರಿಕನ್ ಟಾಲ್ಮೇಸ್ ಮೇವಿನ ಬೀಜ ವಿತರಿಸಲಿದ್ದೇವೆ. ಇನ್ನು ರೈತ ಉತ್ಪಾದಕ ಸಹಕಾರಿ ಸಂಘಗಳ ಮೂಲಕ ಈಗಾಗಲೇ 23 ಮೆಟ್ರಿಕ್ ಟನ್ ರಸಮೇವನ್ನು ಬಹಳಷ್ಟು ರೈತರಿಗೆ ವಿತರಿಸಿದ್ದೇವೆ" ಎಂದು ಈಟಿವಿ ಭಾರತಕ್ಕೆ ಬೆಳಗಾವಿ ಸಹಕಾರಿ ಹಾಲು-ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ಡಾ. ಶ್ರೀಕಾಂತ ವಿ.ಎನ್. ತಿಳಿಸಿದರು.
ರಣ ರಣ ಬಿಸಿಲಿನಲ್ಲೂ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು-ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್) ಕ್ಷೀರ ಕ್ರಾಂತಿ ಮಾಡಿದೆ. ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ ಕೊಲೇರ ಮೇವಿನ ಲಭ್ಯತೆ ಕುರಿತು ಮಾಹಿತಿ ನೀಡಿದ್ದು, ಚಿಕ್ಕೋಡಿ ತಾಲ್ಲೂಕಿನಲ್ಲಿ 1 ಕೆಜಿಗೆ 2 ರೂ. ದರದಂತೆ ಸಹಾಯಧನದಡಿ 32 ಟನ್ ಮೇವು ರೈತರಿಗೆ ಮಾರಾಟ ಮಾಡಲಾಗಿದೆ. ಅದೇ ರೀತಿ ಅಥಣಿ ತಾಲ್ಲೂಕಿನಲ್ಲಿ 3 ಟನ್ ಮಾರಲಾಗಿದೆ. ಜಿಲ್ಲೆಯಾಧ್ಯಂತ 66 ಮೇವು ಬ್ಯಾಂಕ್ಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಜಿಲ್ಲೆಯ ರೈತರಿಗೆ ಮೇವು ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಗಡಿ ಜಿಲ್ಲೆಯಲ್ಲಿ ಬಿಸಿಲಿನಿಂದ ಜನರು ಹೈರಾಣ: ಹವಾಮಾನ ಇಲಾಖೆಯಿಂದ ತಾಪಮಾನ ಏರಿಕೆ ಎಚ್ಚರಿಕೆ - Rising Temperature