ಹಾವೇರಿ:ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮೈಕ್ರೋ ಫೈನಾನ್ಸ್ಗಳ ಕಿರುಕುಳ ಹೆಚ್ಚಾಗುತ್ತಿರುವುದರಿಂದ ಬೇಸತ್ತ ಜನ ಊರು ತೊರೆಯುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಮೈಸೂರು ಮತ್ತು ಚಾಮರಾಜನಗರದಲ್ಲೂ ಇದೇ ರೀತಿಯ ಘಟನೆಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದವು.
ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಇದೀಗ ಬಹುತೇಕ ಮನೆಗಳಿಗೆ ಬೀಗಹಾಕಲಾಗಿದೆ. ಮನೆ ಖಾಲಿ ಮಾಡಿರುವ ಜನರು ಎಲ್ಲಿ ಹೋಗುತ್ತಾರೆ ಎಂದು ತಿಳಿಸದೆ ದೂರ ದೂರದ ಊರುಗಳಿಗೆ ತೆರಳುತ್ತಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ಎಂದು ಇಲ್ಲಿಯ ನಿವಾಸಿಗಳು ಆರೋಪಿಸುತ್ತಿದ್ದಾರೆ.
ಮೈಕ್ರೋ ಫೈನಾನ್ಸ್‌ವರು ಮನೆ ತನಕ ಬಂದು ಸಾಲ ನೀಡಿ ಅದಕ್ಕೆ ಬಡ್ಡಿ ಕಟ್ಟಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಬಡ್ಡಿ ಕಟ್ಟುವುದು ಸ್ವಲ್ಪ ತಡವಾದರೂ ಸಾಕು ಬಾಯಿಗೆ ಬಂದಂಗೆ ಬೈಯ್ಯುತ್ತಾರೆ. ಇವರ ಕಿರುಕುಳ ತಾಳಲಾರದೆ ಬಡಾವಣೆಯ ಬಹುತೇಕರು ಮನೆ ತೊರೆದು ಎಲ್ಲೆಲ್ಲೊ ಹೋಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಸಾಲಪಡೆದ ಅರಿಭಾ ಎಂಬುವವರು ಮಾತನಾಡಿ, ''ಮನೆಯಲ್ಲಿ ಕಷ್ಟ ಇದೆ ಎಂದು ನಾನು ಸಾಲ ತೆಗೆದುಕೊಂಡಿದ್ದೆ. ಒಂದು ವಾರವೂ ಸಾಲ ಕಟ್ಟುವುದನ್ನ ತಪ್ಪಿಸಿಲ್ಲ. ನಾನು ಬ್ಯಾಡಗಿ ಮೆಣಸಿನಕಾಯಿ ಕೆಲಸಕ್ಕೆ ಹೋಗಿದ್ದೆ. ಆಗ ಫೈನಾನ್ಸ್‌ನವರು ಮನೆ ಬಳಿ ಬಂದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ಆಗ ನಮ್ಮ ಮನೆಯಲ್ಲಿರುವ ಯುವತಿ, ಅಮ್ಮ ಬರುವವರೆಗೆ ತಡೆಯಿರಿ, ಮನೆ ಮುಂದೆ ಗಲಾಟೆ ಮಾಡಬೇಡಿ ಎಂದಿದ್ದಾಳೆ. ಆಗ ಫೈನಾನ್ಸ್‌ನವರು, ಹಣ ಕಟ್ಟುವವರೆಗೆ ನೀನು ನಮ್ಮ ಮನೆಗೆ ಕೆಲಸಕ್ಕೆ ಬರುತ್ತೀಯಾ? ಎಂದು ಕೇಳಿದ್ದಾರೆ. ಸಾಲಕಟ್ಟಿ ಎಂದು ಮನೆ ಮುಂದೆ ಖುರ್ಚಿ ಹಾಕಿಕೊಂಡು ಕೂರುತ್ತಾರೆ. ಒಂದು ದಿನ ಹೆಚ್ಚು ಕಡಿಮೆಯಾದ್ರು ಮನೆ ಮುಂದೆ ಬಂದು ಜಗಳ ಮಾಡುತ್ತಾರೆ'' ಎಂದಿದ್ದಾರೆ.