ಹಾವೇರಿ: ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ ಕೇಳಿಬಂದಿದೆ. ರಾಣೇಬೆನ್ನೂರು ನಗರದ ಅಡವಿ ಆಂಜನೇಯ ಬಡಾವಣೆಯ 42 ವರ್ಷದ ಮಾಲತೇಶ್ ಅರಸಿಕೇರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಮಾಲತೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಮಾಲತೇಶ್ ಅಡವಿ ಆಂಜನೇಯ ಬಡಾವಣೆಯಲ್ಲಿ ಹೇರ್ ಕಟಿಂಗ್ ಸಲೂನ್ ನಡೆಸುತ್ತಿದ್ದರು. ಮಾಲತೇಶ್ - ಗೀತಾ ದಂಪತಿ ನಾಲ್ಕು ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಸಾಲ ಕಟ್ಟಲು ಹಣ ತರೋಕೆ ಅಂತ ಮಾಲತೇಶ್ ಪತ್ನಿ ತವರು ಮನೆಗೆ ಹೋಗಿದ್ದ ವೇಳೆ ಮಾಲತೇಶ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಮೃತ ಮಾಲತೇಶ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಅದರಲ್ಲಿ ಎರಡನೇ ಮಗನಿಗೆ ಕೇವಲ 6 ತಿಂಗಳು. ಕಂದಮ್ಮನನ್ನು ಬಿಟ್ಟು ಮಾಲತೇಶ್ ಸಾವಿನ ಹಾದಿ ಹಿಡಿದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾಲತೇಶ್ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಮೃತನ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿತ್ತು.