ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಲಾದ ಮೆಟ್ರೋ ಫೀಡರ್ ಬಸ್‌ಗಳ ಸೇವೆ ಮತ್ತಷ್ಟು ಹೆಚ್ಚಾಗಲಿದೆ. ಏಪ್ರಿಲ್ ಅಂತ್ಯದೊಳಗೆ 121 ಫೀಡರ್ ಬಸ್‌ಗಳನ್ನು ನಗರ ಸಾರಿಗೆ ಸಂಸ್ಥೆ ಕಾರ್ಯಾಚರಣೆಗೆ ಇಳಿಸಲು ಮುಂದಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆ ಬಿಎಂಟಿಸಿ ಫೀಡರ್ ಬಸ್‌ಗಳ ಸೇವೆಯನ್ನು ಹೆಚ್ಚಿಸುತ್ತಿದೆ. ಬಿಎಂಟಿಸಿ ಮತ್ತು ನಮ್ಮ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಫೀಡರ್‌ಬಸ್‌ಗಳ ಸೇವೆಯನ್ನು ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ ಶೀಘ್ರವೇ ಮತ್ತಷ್ಟು ಮೆಟ್ರೋ ಫೀಡರ್ ಸೇವೆ ವಿಸ್ತರಣೆಯಾಗುವ ನಿರೀಕ್ಷೆಯಿದೆ.
ಎರಡು ಬಿಎಂಟಿಸಿ ಮೆಟ್ರೋ ಫೀಡರ್ ಬಸ್‌ಗಳು ಜನವರಿಯಲ್ಲಿ ಸಂಚಾರ ಆರಂಭಿಸಿದ್ದು, ಒಂದು ನಗರದ ಭಟ್ಟರಹಳ್ಳಿ, ಸೀಗೇಹಳ್ಳಿ ಸರ್ಕಲ್, ಕುದುರೆಸೊನ್ನೆನ ಹಳ್ಳಿ ಮತ್ತು ಬೆಲ್ತೂರು ಮೂಲಕ ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಟಿನ್ ಫ್ಯಾಕ್ಟರಿವರೆಗೆ ಪ್ರತಿದಿನ ಮೂರು ಟ್ರಿಪ್‌ಗಳನ್ನು ಪೂರೈಸುತ್ತಿದೆ. ಇನ್ನೊಂದು ಫೀಡರ್ ಬಸ್ ಕೆಂಗೇರಿ ಟಿಟಿಎಂಸಿ ನಿಲ್ದಾಣದಿಂದ ಕೆಂಗೇರಿ ಆರ್‌ಡಬ್ಲ್ಯೂಎಸ್ ಗೇಟ್, ದೊಡ್ಡಬೆಲೆ, ಪ್ರಾವಿಡೆಂಟ್ ಅಪಾರ್ಟ್‌ಮೆಂಟ್, ಸೇಂಟ್ ಬೆನಡಿಕ್ಟ್ ಚರ್ಚ್, ಅಂಚೆಪಾಳ್ಯ ಮತ್ತು ಕೆಂಗೇರಿ ಮೂಲಕ ಸಂಚರಿಸುತ್ತಿದೆ.
300 ಬಸ್‌ಗಳ ಮೆಟ್ರೋ ಫೀಡರ್ ಸೇವೆ:ಮೆಟ್ರೋ ಫೀಡರ್ ಮಾರ್ಗಗಳಲ್ಲಿ 9 ಮೀಟರ್ ಉದ್ದದ ಮಿನಿ ಬಸ್‌ಗಳನ್ನು ವಿಶೇಷ ರೀತಿಯಲ್ಲಿ ಸಜ್ಜುಗೊಳಿಸಿ ರಸ್ತೆಗಿಳಿಸಲಾಗುವುದು. 2024ರ ಏಪ್ರಿಲ್ ಅಂತ್ಯದೊಳಗೆ ಫೀಡರ್ ಬಸ್‌ಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.