ಬೆಳಗಾವಿ: ಎಂಇಎಸ್ ಮುಖಂಡರು ಮಹಾರಾಷ್ಟ್ರ ಸಚಿವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ. ಆರೋಗ್ಯ ವಿಮೆ ಮರು ಜಾರಿ, ಮರಾಠಿ ಭಾಷೆ ಬಳಕೆಗೆ ಅವಕಾಶ ಸೇರಿದಂತೆ ಒಟ್ಟು ಏಳು ಬೇಡಿಕೆಗಳನ್ನು ಈಡೇರಿಸುವಂತೆ ಎಂಇಎಸ್ ಮುಖಂಡ ರಮಾಕಾಂತ ಕೊಂಡೊಸ್ಕರ್ ಸೇರಿ ಮತ್ತಿತರರು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶುಂಭುರಾಜೆ ದೇಸಾಯಿ ಅವರನ್ನು ಭೇಟಿಯಾಗಿ ಮನವಿ ನೀಡಿದ್ದಾರೆ.
ಬೆಳಗಾವಿ ಗಡಿ ಭಾಗದಲ್ಲಿ ಮರಾಠಿ ಭಾಷೆ ಬಳಸಲು ಅವಕಾಶ ನೀಡಬೇಕು. ಗಡಿ ಭಾಗದ ಜನರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ಪತ್ರ ಒದಗಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯ ಪ್ರವೇಶಿಸುವಂತೆ ಮಾಡಬೇಕು. ಅದೇ ರೀತಿ ಮಹಾರಾಷ್ಟ್ರದ ಆರೋಗ್ಯ ವಿಮೆಗೆ ಮತ್ತೆ ಚಾಲನೆ ನೀಡಬೇಕು. ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಹಾರಾಷ್ಟ್ರ ಸರ್ಕಾರ ಚರ್ಚಿಸಬೇಕು ಎಂದು ಎಂಇಎಸ್ ಮುಖಂಡರು ಕೋರಿದ್ದಾರೆ.
ಮರಾಠಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಬೆಳಗಾವಿ ಸಮೀಪದಲ್ಲಿರುವ ಮಹಾರಾಷ್ಟ್ರದ ಶಿನ್ನೊಳ್ಳಿಯಲ್ಲಿ ತಹಶೀಲ್ದಾರ್ ಮಟ್ಟದ ಅಧಿಕಾರಿ ಕಚೇರಿ ಆರಂಭಿಸಬೇಕು. ಅಲ್ಲದೇ ಕರ್ನಾಟಕದಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆಗೆ ಮತ್ತೆ ಚಾಲನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.