ಮಂಡ್ಯ:ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆಯಲ್ಲಿ ತಲೆಮರೆಸಿಕೂಂಡಿದ್ದ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದ 21 ವರ್ಷದ ನಿತೀಶ್ ಬಂಧಿತ ಆರೋಪಿ.
ಜನವರಿ 20ರಂದು ಮಾಣಿಕ್ಯನಹಳ್ಳಿ ಗ್ರಾಮದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹತ್ಯೆ ಮಾಡಿ, ಶವ ಹೂತಿಡಲಾಗಿತ್ತು. ಜನವರಿ 22ರ ಸಂಜೆ ಮೃತದೇಹ ಪತ್ತೆಯಾಗಿತ್ತು. ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಹಾಗೂ ಕೊಲೆಯಾದ ಶಿಕ್ಷಕಿ ಇಬ್ಬರು ಒಂದೇ ಗ್ರಾಮದವರಾಗಿದ್ದು, ಪರಿಚಯಸ್ಥರಾಗಿದ್ದರು. ಶಿಕ್ಷಕಿ ಕೊಲೆಯಾದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಇದರಿಂದ ಅನುಮಾನಗೊಂಡು ಪೊಲೀಸರು ತನಿಖೆ ಕೈಗೊಂಡಾಗ, ಆರೋಪಿ ಹೊಸಪೇಟೆಯಲ್ಲಿರುವುದು ಗೊತ್ತಾಗಿ ಬಂಧಿಸಿದ್ದಾರೆ.
ಮಂಡ್ಯ ಎಸ್ಪಿ ಹೇಳಿಕೆ: "ಕಳೆದ ಶನಿವಾರ ಶಿಕ್ಷಕಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಆ ದಿನ ಸಂಜೆ ನರಸಿಂಹ ದೇವಸ್ಥಾನದ ಹಿಂಭಾಗ ಗುಡ್ಡದಲ್ಲಿ ಶಿಕ್ಷಕಿಯ ಸ್ಕೂಟಿ ಪತ್ತೆಯಾಗಿತ್ತು. ಆದರೆ ಮಹಿಳೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ತದನಂತರ ಸೋಮವಾರವೂ ತನಿಖೆ ಮುಂದುವರೆಸಲಾಗಿತ್ತು. ಈ ವೇಳೆ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಮೃತದೇಹ ದೊರೆತಿದೆ. ಮೃತದೇಹ ಕಾಣೆಯಾದ ಮಹಿಳೆಯದೇ ಎಂಬುದು ಖಚಿತವಾಯಿತು. ಆಗ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣ ಎಂದು ಬದಲಾಯಿಸಿಕೊಳ್ಳಲಾಯಿತು. ಗ್ರಾಮದ ಯುವಕ ನಿತೀಶ್ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಅನುಮಾನಗೊಂಡ ತನಿಖೆ ಕೈಗೊಂಡಿದ್ದೆವು. ಹೊಸಪೇಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ತಾನೇ ವೇಲ್ನಿಂದ ಹತ್ಯೆ ಮಾಡಿ ಶವ ಹೂತು ಹಾಕಿರುವುದಾಗಿ ಆರೇಪಿ ಬಾಯ್ಬಿಟ್ಟಿದ್ದಾನೆ" ಎಂದು ಎಸ್ಪಿ ಎನ್.ಯತೀಶ್ ತಿಳಿಸಿದ್ದಾರೆ.
"ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಮನಸ್ತಾಪವಾಗಿದೆ. ಇದರಿಂದ ಕೋಪಗೊಂಡ ಆರೋಪಿ, ಬರ್ತ್‌ಡೇ ನೆಪದಲ್ಲಿ ಬೆಟ್ಟದ ತಪ್ಪಲಿಗೆ ಶಿಕ್ಷಕಿಯನ್ನು ಕರೆಸಿಕೊಂಡಿದ್ದ. ಅದಕ್ಕೂ ಮುನ್ನವೇ ಕೊಲೆ ಮಾಡುವ ಉದ್ದೇಶದಿಂದ ಬೆಟ್ಟದ ತಪ್ಪಲಿನಲ್ಲಿ ಗುಂಡಿ ತೋಡಿದ್ದ. ಆ ಬಳಿಕ ದೇವಸ್ಥಾನದ ಹಿಂಭಾಗಕ್ಕೆ ಬಂದ ಶಿಕ್ಷಕಿ ಜೊತೆ ಮೊದಲು ಜಗಳವಾಡಿ ಬಳಿಕ ಆಕೆಯ ವೇಲ್ನಿಂದಲೇ ಹತ್ಯೆ ಮಾಡಿದ್ದಾನೆ. ನಂತರ ಗುಂಡಿಯಲ್ಲಿ ಮೃತದೇಹ ಮುಚ್ಚಿ ಮನೆಗೆ ಹೋಗಿದ್ದ. ಮರುದಿನ ಊರಲ್ಲೇ ಇದ್ದ. ಸೋಮವಾರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಹೊಸಪೇಟೆಗೆ ಪರಾರಿಯಾಗಿದ್ದ" ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೇಲುಕೋಟೆ ಬೆಟ್ಟದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಶಿಕ್ಷಕಿ ಶವ ಪತ್ತೆ: ಕೊಲೆ ಪ್ರಕರಣ ದಾಖಲು