ನವದೆಹಲಿ/ಬೆಂಗಳೂರು:ರಾಜ್ಯದ ಕೈಗಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕೇಂದ್ರ ಸರಕಾರದ ಸಹಕಾರ ಕೋರಿ ಮತ್ತು ಅಗತ್ಯ ಬಂಡವಾಳ ಹೂಡಿಕೆ ನಿರೀಕ್ಷಿಸಿ ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮಂಗಳವಾರ ಭೇಟಿ ಮಾಡಿ, ವಿಸ್ತೃತ ಮಾತುಕತೆ ನಡೆಸಿದ್ಧಾರೆ.
2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಪಾಟೀಲ್ ದೆಹಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ಮೊದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ರಕ್ಷಣಾ ಸಾಧನಗಳ ಉತ್ಪಾದನೆ ಮತ್ತು ಅವುಗಳ ರಫ್ತಿನ ಮೇಲೆ ಇರುವ ನಿರ್ಬಂಧದ ತೆರವು, ಡಿಫೆನ್ಸ್ ಕಾರಿಡಾರ್ ಸ್ಥಾಪನೆಯ ಜರೂರು, ರಾಜ್ಯದಲ್ಲಿರುವ ಬಿಎಚ್ಇಎಲ್ ಮತ್ತು ಬಿಇಎಂಎಲ್ ತರಹದ ಕೇಂದ್ರೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ಮತ್ತು ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವಿನ ಬಗ್ಗೆ ಚರ್ಚಿಸಿದರು.
ಬಳಿಕ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಂಡ ಪಾಟೀಲ್, ಮೇಲಿನ ಸಂಗತಿಗಳ ಜತೆಗೆ ಕರ್ನಾಟಕದ ಕೈಗಾರಿಕಾ ವಲಯದ ಬೆಳವಣಿಗೆಗೆ ಅಗತ್ಯವಿರುವ ನಿರ್ಣಾಯಕ ನೆರವಿನ ಕುರಿತು ವಿಚಾರ ವಿನಿಮಯ ನಡೆಸಿದರು. ಅಲ್ಲದೆ ಅವರು, ಇ.ವಿ. ವಲಯದಲ್ಲಿ ನವೋದ್ಯಮಗಳಿಗೆ 10 ಸಾವಿರ ಕೋಟಿ ರೂ. ಪೂರೈಸಲು ಎದುರಾಗಿರುವ ಸವಾಲು, ಫೇಮ್-3 ಯೋಜನೆಯ ಜಾರಿಯಲ್ಲಿ ಆಗುತ್ತಿರುವ ವಿಳಂಬ, ರಕ್ಷಣಾ ತಂತ್ರಜ್ಞಾನ ಹಬ್ಗಳ ಸ್ಥಾಪನೆಯ ಜರೂರು, ಬೆಂಗಳೂರು ಗ್ರಾಮಾಂತರದಲ್ಲಿ ಇಎಂಸಿ ಕ್ಲಸ್ಟರ್ ಸ್ಥಾಪನೆಗೆ ಬಾಕಿ ಇರುವ ಅನುಮೋದನೆ, ಹಾರೋಹಳ್ಳಿ, ಕುಡುತಿನಿ ಮತ್ತು ದೇವಕತ್ತಿಕೊಪ್ಪದಲ್ಲಿ ಕೈಗಾರಿಕಾ ಯೋಜನೆಗಳಿಗೆ ಬಾಕಿ ಇರುವ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ, ಸೆಮಿಕಂಡಕ್ಟರ್ ಕಂಪನಿ ಸ್ಥಾಪನೆಯ ತುರ್ತು ಮತ್ತು ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ರೂಪಿಸಿರುವ 12 ಸ್ಮಾರ್ಟ್ ಸಿಟಿ ಯೋಜನೆಯಿಂದ ಕರ್ನಾಟಕವನ್ನು ಹೊರಗಿಟ್ಟಿರುವುದರ ಬಗ್ಗೆ ಮಾತುಕತೆ ನಡೆಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಚಿವರು, ಬೇಗನೆ ಹಾಳಾಗುವಂತಹ ಪದಾರ್ಥಗಳನ್ನು ವಿಮಾನದ ಮೂಲಕ ಹೊರದೇಶಗಳಿಗೆ ಕಳುಹಿಸುತ್ತಿರುವ ಸಣ್ಣ ಪ್ರಮಾಣದ ರಫ್ತುದಾರರ ಮೇಲೆ ಹೇರಿರುವ ಜಿಎಸ್ಟಿ ತೆರಿಗೆಯನ್ನು ರದ್ದುಪಡಿಸಬೇಕು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ಈಗ ಇರುವ ಭಾರಿ ಆಮದು ತೆರಿಗೆ ಮತ್ತು ಸುಂಕವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ರಾಜ್ಯದ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತುಕತೆ - ministers development talks