ಬೆಂಗಳೂರು:ಕಂದಾಯ ಇಲಾಖೆಯ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಏಪ್ರಿಲ್ 5ರಿಂದ ಮೇ 4ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಸಂಬಂಧಿಸಿದ ಅರ್ಜಿ ಶುಲ್ಕ ಪಾವತಿಸಲು ಮೇ 7ರ ಬ್ಯಾಂಕ್ ಅವಧಿಯವರೆಗೆ ಅವಕಾಶವಿರುತ್ತದೆ ಎಂದಿದ್ದಾರೆ.
ಈ ಮುಂಚೆ ಫೆ.20ರಂದು ಅಧಿಸೂಚನೆ ಹೊರಡಿಸಿ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 3ರವರೆಗೆ ಅವಕಾಶ ಕೊಡಲಾಗಿತ್ತು. ಆದರೆ ಆನ್‌ಲೈನ್ ಅರ್ಜಿಯಲ್ಲಿ ಆದ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ, ಈಗ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೆ-ಸೆಟ್-23 ಕೀ ಉತ್ತರ ಪ್ರಕಟ: ಕಳೆದ ಜನವರಿ 13ರಂದು 42 ವಿವಿಧ ವಿಷಯಗಳಿಗೆ ನಡೆಸಲಾಗಿದ್ದ ಕೆ-ಸೆಟ್-2023ರ ಎಲ್ಲಾ ವಿಷಯಗಳ ಅಂತಿಮ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಎಸ್.ರಮ್ಯಾ ಮತ್ತೊಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಇಂಡಿಯನ್ ಮರ್ಚೆಂಟ್ ನೇವಿಯಲ್ಲಿ 4,000 ಹುದ್ದೆಗಳು: ಅರ್ಹತೆ, ಅರ್ಜಿ ಸಲ್ಲಿಕೆಯ ವಿವರ - Indian Merchant Navy