ಸುಬ್ರಹ್ಮಣ್ಯ (ದಕ್ಷಿನ ಕನ್ನಡ): ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24ರಂದು ಜನಸಾಮಾನ್ಯರ ಅನುಕೂಲಕ್ಕಾಗಿ ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ. ಸಾಮೂಹಿಕ ವಿವಾಹವಾಗಲು ಬಯಸುವವರು ಶ್ರೀ ದೇವಳದ ಕಚೇರಿಯಿಂದ ಅರ್ಜಿ ಫಾರಂ ಪಡೆದು ಫೆ.20ರ ಒಳಗೆ ಸಲ್ಲಿಸಬಹುದು.
ಫೆ.20ರ ಒಳಗೆ ನೋಂದಾಣಿ:ಮಾ.24 ರಂದು ಬೆಳಗ್ಗೆ 11.00 ರಿಂದ 12.00ರ ವರೆಗೆ ನೆರವೇರುವ ವೃಷಭ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ಫೆ.20 ವಧು-ವರರು ನಿಗದಿಪಡಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಫೆ.24ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುವುದು. ಫೆ.28 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾದರೆ, ಮಾ.5ರಂದು ವಧುವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ಬೇಕಾದ ಅಗತ್ಯ ದಾಖಲೆಗಳು:ವಧು-ವರರು ತಮ್ಮ ಪೂರ್ಣ ವಿಳಾಸದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರ ಪ್ರತಿ, ಪಾಸ್‌ಪೋರ್ಟ್ ಸೈಜ್‌ನ 2 ಫೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು-ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಅಥವಾ ಗ್ರಾಮ ಆಡಳಿತಾಧಿಕಾರಿಯಿಂದ ಅಥವಾ ತಹಶೀಲ್ದಾರರಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.