ಮಂಗಳೂರು:ನವಮಂಗಳೂರು ಬಂದರಿಗೆ ಇಂದು 610 ಪ್ರಯಾಣಿಕರೊಂದಿಗೆ ವಿದೇಶಿ ಐಷಾರಾಮಿ ಹಡಗು ಸವೆನ್ ಸೀಸ್ ಮ್ಯಾರಿನರ್ ಆಗಮಿಸಿತು.
ಎನ್ಎಂಪಿಎಗೆ ಈ ಋತುವಿನಲ್ಲಿ ಆಗಮಿಸಿದ ಆರನೇ ಹಡಗು ಇದಾಗಿದ್ದು, 2023-2024 ರ ಆರ್ಥಿಕ ವರ್ಷದಲ್ಲಿ ಆಗಮಿಸಿದ ಅಂತಿಮ ಕ್ರೂಸ್ ಹಡಗು ಆಗಿದೆ. ಸೀಸ್ ಮ್ಯಾರಿನರ್ 610 ಪ್ರಯಾಣಿಕರು ಮತ್ತು 440 ಸಿಬ್ಬಂದಿಯನ್ನು ಹೊತ್ತು ಮಂಗಳೂರಿಗೆ ಆಗಮಿಸಿತ್ತು. ಹಡಗಿನಿಂದ ಪ್ರಯಾಣಿಕರು ಇಳಿಯುವಾಗ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಪ್ರವಾಸಿಗರು ಕ್ರೂಸ್ ಲಾಂಜ್‌ನಲ್ಲಿ ವಿವಿಧ ಸಾಂಸ್ಕೃತಿಕ ಆಕರ್ಷಣೀಯ ಸ್ಥಳಗಳನ್ನು ನೋಡಿ ಆನಂದಿಸಿದರು. ಎಲ್ಲಾ ಸಂದರ್ಶಕರಿಗೆ ಸ್ಮರಣೀಯ ಮತ್ತು ಆನಂದದಾಯಕ ಅನುಭವವನ್ನು ನೀಡಲು ಎನ್ಎಂಪಿಎ ವ್ಯಾಪಕ ಸಿದ್ಧತೆಗಳನ್ನು ಮಾಡಿತ್ತು.
ವಿದೇಶಿಗರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರವಾಸಿಗರಿಗೆ ದೇವಾಲಯಗಳು, ಪ್ರವಾಸಿ ತಾಣಗಳು, ನಗರದ ಮಾರುಕಟ್ಟೆಗಳು ಮತ್ತು ಅಂಗಡಿಗಳನ್ನು ವೀಕ್ಷಿಸಲು ಶಟಲ್ ಬಸ್‌ಗಳು ಮತ್ತು ಟ್ಯಾಕ್ಸಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಮಂಗಳೂರಿನ ಹೆಸರಾಂತ ಯಕ್ಷಗಾನ ಕಲಾ ಪ್ರಕಾರವನ್ನು ಪ್ರದರ್ಶಿಸುವ ವಿಶಿಷ್ಟ ಸೆಲ್ಫಿ ಸ್ಟ್ಯಾಂಡ್ ಪ್ರಯಾಣಿಕರಿಗೆ ಭೇಟಿಯ ಶಾಶ್ವತ ಸ್ಮರಣಿಕೆ ಒದಗಿಸಿತು. ನಂತರ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಪ್ರವಾಸಿಗರ ಗಮನ ಸೆಳೆದವು.
ಕಾರ್ಕಳ ಗೊಮ್ಮಟೇಶ್ವರ ದೇವಸ್ಥಾನ, ಮೂಡುಬಿದಿರೆ 1000 ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ನಗರದ ಸಾಂಪ್ರದಾಯಿಕ ಮನೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಕರು ಭೇಟಿ ನೀಡಿದರು. ನಂತರ ಹಡಗು ಮರ್ಮು ಗೋವಾ ಬಂದರಿಗೆ ಪ್ರಯಾಣ ಬೆಳೆಸಿತು.
ಇದನ್ನೂಓದಿ:ಚಾಮರಾಜನಗರ: ಅಂಕಾಳ ಪರಮೇಶ್ವರಿ ಜಾತ್ರೆ ಸಂಭ್ರಮ; 3 ಸಾವಿರ ಮಂದಿಗೆ ಭರ್ಜರಿ ಬಾಡೂಟ - ANKALA PARAMESHWARI