ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿದೆ. ಸುರಿಯುತ್ತಿರುವ ಮಳೆಯ ಎಫೆಕ್ಟ್ ನಗರದ ಹಲವೆಡೆ ಅವಾಂತರ ಸೃಷ್ಟಿಸಿದೆ. ಯಲಹಂಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ವಿಲ್ಲಾಗಳಿಗೆ ನೀರು ನುಗ್ಗಿ ಅಲ್ಲೋಲ ಕಲ್ಲೋಲವಾಗಿದೆ.
ಬೆಂಗಳೂರಲ್ಲಿ ಮಳೆ ಎದುರಿಸಲು ಸಕಲ ಸಿದ್ಧತೆಗಳನ್ನೆಲ್ಲ ಮಾಡಿಕೊಂಡಿದ್ದೇವೆ ಎಂದು ಸಮಾಜಾಯಿಸಿ ನೀಡುವ ಬಿಬಿಎಂಪಿಯ ಕೆಲಸ ಮತ್ತೊಮ್ಮೆ ಬಟಾಬಯಲಾಗಿದೆ. ನಿನ್ನೆ ಸಂಜೆ ಮತ್ತು ಇಂದು ಸುರಿಯುತ್ತಿರುವ ಮಳೆಗೆ ಯಲಹಂಕ ನಾರ್ಥ್ ವುಡ್ ಲೇಔಟ್ ಸಂಪೂರ್ಣ ಜಲಾವೃತವಾಗಿದ್ದು, ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ.
ಯಲಹಂಕದ ನಾರ್ಥ್ವುಡ್ ಲೇಔಟ್ ಬಳಿ ಬಿಬಿಎಂಪಿ ಅವೈಜ್ಞಾನಿಕವಾಗಿ ರಾಜಕಾಲುವೆ ನಿರ್ಮಾಣ ಮಾಡಿದೆ. ಇದರ ಎಫೆಕ್ಟ್ಗೆ 22ಕ್ಕೂ ಹೆಚ್ಚು ವಿಲ್ಲಾಗಳು ಜಲಾವೃತವಾಗಿವೆ. ಕಳೆದ ಒಂದು ವರ್ಷದ ಹಿಂದೆ ರಾಜಕಾಲುವೆ ನಿರ್ಮಾಣಕ್ಕೆ ಮುಂದಾಗಿದ್ದ ಬಿಬಿಎಂಪಿ, ಪಕ್ಕದಲ್ಲಿದ್ದ ಪುಟ್ಟೇನಹಳ್ಳಿ ಕೆರೆಗೆ ನೀರು ಬಿಡಲು ಪ್ಲ್ಯಾನ್ ಮಾಡಿತ್ತು.
ಆದರೆ ರಾಜಕಾಲುವೆಯ ಕೊಳಚೆ ನೀರನ್ನು ಕೆರೆಗಳಿಗೆ ಬಿಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆ ನೀಡಿದ್ದ ಕಾರಣ ಬಿಬಿಎಂಪಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿತ್ತು. ಇದರ ಪರಿಣಾಮ ರಾಜಕಾಲುವೆ ನೀರು ಹೊರಹೋಗಲು ಜಾಗ ಇಲ್ಲದಾಗಿ ಸಂಪೂರ್ಣ ನೀರು ಲೇಔಟ್ಗೆ ನುಗ್ಗಿದೆ. ನೀರು ನುಗ್ಗಿದ ಪರಿಣಾಮ ವಾಹನಗಳೆಲ್ಲ ಜಲಾವೃತವಾಗಿವೆ. ಅನೇಕ ವಿಲ್ಲಾಗಳಿಗೂ ನೀರು ನುಗ್ಗಿದೆ. ಇದರಿಂದ ಕೆಲವರು ಮನೆಯಿಂದ ಆಚೆ ಬರಲಾಗದೇ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಕೋಟಿಗಟ್ಟಲೆ ಕೊಟ್ಟು ಖರೀದಿ ಮಾಡಿದ್ದ ವಿಲ್ಲಾಗಳನ್ನ ಬಿಟ್ಟು ಹೋಟೆಲ್ಗಳಿಗೆ ತೆರಳಿದ್ದಾರೆ.
ಈ ಘಟನೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ, ಉಡಾಫೆ ಉತ್ತರ ನೀಡುತ್ತಿದ್ದಾರೆ. ಜಲಾವೃತ ಆಗೋದಕ್ಕೆ ಕಾರಣ ನಾವಲ್ಲ, ಅರಣ್ಯ ಇಲಾಖೆ ಎಂದು ಬೊಟ್ಟು ಮಾಡಿ ಬಿಬಿಎಂಪಿ ಜಾರಿಕೊಳ್ಳುತ್ತಿದೆ. ಅರಣ್ಯ ಇಲಾಖೆ ಪುಟ್ಟೇನಹಳ್ಳಿ ಕೆರೆಯಿಂದ ನೀರು ಹಾದುಹೋಗುವುದಕ್ಕೆ ಪೈಪ್ಲೈನ್ ಅಳವಡಿಸಬೇಕಿದೆ. ಪೈಪ್ಲೈನ್ ಅಳವಡಿಸದ ಕಾರಣ ನೀರು ತುಂಬಿ ಜಲಾವೃತವಾಗಿದೆ. ನಾಳೆ ಅರಣ್ಯ ಇಲಾಖೆಗೆ ಬಿಬಿಎಂಪಿಯಿಂದ ಪತ್ರ ಬರೆಯುತ್ತೇವೆ ಎಂದು ಹೇಳಿಕೆ ನೀಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಅಲರ್ಟ್ ಘೋಷಣೆ:ಮತ್ತೆ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಆರೆಂಜ್, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಭಾನುವಾರ ಸಂಜೆ ರಾಜ್ಯದಲ್ಲಿ ಸುರಿದ ಮಳೆಯ ಪ್ರಮಾಣ:
ಬೆಂಗಳೂರು ಹೆಚ್ಎಎಲ್ ವಿಮಾನ ನಿಲ್ದಾಣ- 22.6 ಎಂ.ಎಂ
ಬೆಳಗಾವಿ ನಗರ - 12.6 ಎಂ. ಎಂ
ಹೊನ್ನಾವರ - 3.2 ಎಂ. ಎಂ
ಶಿರಾಲಿ - 3.2 ಎಂ. ಎಂ
ಮಾಧವರ - 28. ಎಂ. ಎಂ