ಮಂಗಳೂರು:ಫ್ಯಾಕ್ಟರಿಯ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥರಾದ ಘಟನೆ ನಡೆದಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸಂಜೆ ಅಡ್ಯಾರ್ನಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಮಾಡುವ ಸಂಸ್ಥೆಯಿಂದ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಸುತ್ತಮುತ್ತಲಿನ ನಿವಾಸಿಗಳು ಎಳನೀರನ್ನು ಲೀಟರ್ ಲೆಕ್ಕದಲ್ಲಿ ಖರೀದಿಸಿದ್ದರು. ಇದನ್ನು ಕುಡಿದ ನಂತರ ಮಂಗಳವಾರ ಬೆಳಗ್ಗೆಯಿಂದ ಸಂಜೆಯ ತನಕ ವಾಂತಿ ಮತ್ತು ಭೇದಿಯಿಂದ ಬಳಲಿದ್ದಾರೆ.
ಈ ಸಂಸ್ಥೆಯಲ್ಲಿ ಉತ್ಪಾದನೆಯಾಗುವ ಎಳನೀರನ್ನು ಸಾರ್ವಜನಿಕರಿಗೆ ಲೀಟರ್ಗೆ 40 ರೂಪಾಯಿಯಂತೆ ನೀಡಲಾಗಿತ್ತು. ವಾಂತಿ, ಭೇದಿಯಿಂದ ಬಳಲಿದವರಲ್ಲಿ ಮೂವರು ಸ್ಥಳೀಯ ವೈದ್ಯರುಗಳಲ್ಲಿ ಪರೀಕ್ಷಿಸಿ ಔಷಧೋಪಚಾರ ಪಡೆದು ಗುಣಮುಖರಾಗದೇ, ನಗರದ ಪಳ್ನೀರ್ನಲ್ಲಿರುವ ಹೈ ಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಉಳಿದ 12 ಮಂದಿ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಇತರೆಡೆ ಹೊರ ರೋಗಿಗಳಾಗಿ ಹೆಚ್ಚಿನ ಔಷಧೋಪಚಾರ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.