ಮೈಸೂರು:ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಮೈಸೂರಿನ ಯುವ ಆಲ್ರೌಂಡರ್ ಮನ್ವಂತ್ ಕುಮಾರ್ 30 ಲಕ್ಷ ರೂ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಐಪಿಎಲ್ಗೆ ಆಯ್ಕೆಯಾದ ಮೈಸೂರಿನ ಮೊದಲ ಕ್ರಿಕೆಟಿಗ ಇವರಾಗಿದ್ದಾರೆ. ಮಗನ ಆಯ್ಕೆ ಬಗ್ಗೆ ಪೋಷಕರು, ಸಹೋದರ ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮನ ಸಾಧನೆಯ ಹಿಂದೆ ಅಣ್ಣ ಹೇಮಂತ್ ಕುಮಾರ್ ಕೂಡ ಬೆನ್ನೆಲುಬಾಗಿದ್ದಾನೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಯುವಕನೊಬ್ಬ ಕ್ರಿಕೆಟ್ಗಾಗಿ 15 ಕಿ.ಮೀ. ಸೈಕಲ್ನಲ್ಲಿ ಹೋಗಿ, ತರಬೇತಿ ಪಡೆದು ಈ ಮಟ್ಟಕ್ಕೆ ಬೆಳೆದಿದ್ದಾನೆ. ಸೈಕಲ್ನಿಂದಲೇ ಐಪಿಎಲ್ಗೆ ದಾರಿ ತೆರೆದಿದ್ದು, ಯುವ ಕ್ರಿಕೆಟಿಗನ ಕುರಿತು ಒಂದಿಷ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಮನ್ವಂತ್ ಕುಮಾರ್ ಸಹೋದರ (ETV Bharat) ಮನ್ವಂತ್ ಕುಮಾರ್ ತಂದೆ ಲಕ್ಷ್ಮಿ ಕುಮಾರ್ ನಿವೃತ್ತ ಬಿಎಂಟಿಸಿ ಬಸ್ ಚಾಲಕ, ತಾಯಿ ಶ್ರೀದೇವಿ ಕುಮಾರ್ ಗೃಹಿಣಿಯಾಗಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು. ಮೊದಲನೆಯವ ಹೇಮಂತ್ ಕುಮಾರ್ ಕೂಡ ಕ್ರಿಕೆಟಿಗ. ಜೊತೆಗೆ, ಮನ್ವಂತ್ ಕುಮಾರ್ ಸಹ ಕ್ರಿಕೆಟಿಗನಾಗಿ, ಈಗ ಸಾಧನೆಯ ಹಾದಿಯಲ್ಲಿದ್ದಾನೆ. ಇಬ್ಬರಿಬ್ಬರಿಗೂ ಕ್ರಿಕೆಟ್ ತರಬೇತಿ ಕೊಡಿಸಲು ತಂದೆಗೆ ಕಷ್ಟವಾಗಿತ್ತು. ಆಗ ಮೈಸೂರಿನ ಕ್ರಿಕೆಟ್ ಸಂಸ್ಥೆಯೊಂದು ಉಚಿತ ತರಬೇತಿ ನೀಡಿದೆ.
ಈಟಿವಿ ಭಾರತದೊಂದಿಗೆ ಮನ್ವಂತ್ ಕುಮಾರ್ ಪೋಷಕರ ಮಾತು (ETV Bharat) ಕ್ರಿಕೆಟ್ ಜೀವನಕ್ಕೆ ದಾರಿತೋರಿದ ಸೈಕಲ್:ಮನ್ವಂತ್ ಮನೆ ಮೈಸೂರಿನ ಶ್ರೀನಗರದಲ್ಲಿದೆ. ನಿತ್ಯ ಮನೆಯಿಂದ ಸುಮಾರು 15 ಕಿಲೋಮೀಟರ್ ಸೈಕಲ್ ಮೂಲಕ ತೆರಳಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಇಂದು ಐಪಿಎಲ್ಗೆ ಆಯ್ಕೆ ಆಗಬೇಕಾದರೆ ಅವರ ಸೈಕಲ್ ಕೂಡ ಪ್ರಮುಖ ಕಾರಣವಾಗಿದೆ. ಸಹೋದರರಿಬ್ಬರೂ ಕೂಡ ಕ್ರಿಕೆಟ್ ಅಭ್ಯಾಸಕ್ಕೆ ತೆರಳಬೇಕಿತ್ತು. ಆದರೆ, ಹೇಮಂತ್ ಬಳಿ ಮಾತ್ರ ಸೈಕಲ್ ಇರುವುದರಿಂದ ಇಬ್ಬರೂ ಒಂದೇ ಸೈಕಲ್ನಲ್ಲಿ ಕ್ರಿಕೆಟ್ ಕಿಟ್ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆಗ ತಂದೆಯೇ ಕಷ್ಟಪಟ್ಟು ಹಣ ಹೊಂದಿಸಿ ಸೈಕಲ್ ತೆಗೆಸಿಕೊಟ್ಟಿದ್ದರು. ಹೀಗಾಗಿ, ಆ ಸೈಕಲ್ ಯಾರಿಗೂ ಕೊಡದೇ, ಸಹೋದರರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಈಗಲೂ ಮೈಸೂರಿಗೆ ಬಂದಾಗಲೆಲ್ಲ ಅದೇ ಸೈಕಲ್ನಲ್ಲಿ ಮನ್ವಂತ್ ಕುಮಾರ್ ರೌಂಡ್ ಹಾಕುತ್ತಾರಂತೆ.
ಮನ್ವಂತ್ ಕುಮಾರ್ ಸೈಕಲ್ (ETV Bharat) ಮಗನ ಬಗ್ಗೆ ಲಕ್ಷ್ಮಿಕುಮಾರ್ ಹೇಳುವುದೇನು?:ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಮನ್ವಂತ್ ಕುಮಾರ್ ತಂದೆ ಲಕ್ಷ್ಮೀ ಕುಮಾರ್,''ಮಗ 10 ವರ್ಷ ಇರುವಾಗಲೇ ಕ್ರಿಕೆಟ್ ಅಡಲು ಪ್ರಾರಂಭಿಸಿದ. ಅಣ್ಣನೂ ಕೂಡ ಕ್ರಿಕೆಟ್ ಆಡುತ್ತಿರುವ ಕಾರಣ ಅವನ ಬೆಂಬಲವೂ ಸಿಕ್ಕಿದೆ. ಅವನು ಪಟ್ಟ ಕಷ್ಷಕ್ಕೆ ಪ್ರತಿಫಲ ಸಿಕ್ಕಿದೆ. ಬಾಲ್ಯದಿಂದಲೂ ಆತನಿಗೆ ಕ್ರಿಕೆಟ್ ಬಿಟ್ಟರೆ ಬೇರೆ ವಿಷಯದ ಬಗ್ಗೆಯೂ ಆಸಕ್ತಿ ಇರಲಿಲ್ಲ. ಎಡಗೈ ಬ್ಯಾಟರ್ ಹಾಗೂ ಬಲಗೈ ಪಾರ್ಟ್ಟೈಂ ಬೌಲರ್ ಆಗಿದ್ದಾನೆ. ಪ್ರಸ್ತುತ ಸೈಯದ್ ಮುಷ್ತಾಕ್ ಆಲಿ ಟ್ರೋಫಿ ಆಡುತ್ತಿದ್ದಾನೆ''.
''ಬೆಳಗ್ಗೆ 5 ಗಂಟೆಗೆ ಎದ್ದು ವ್ಯಾಯಾಮ ಮಾಡಲು ಹೋಗುತ್ತಿದ್ದ. ನಂತರ ಬಾಲಚಂದ್ರ ಕ್ರಿಕೆಟ್ ಕ್ಲಬ್ನಲ್ಲಿ 9 ಗಂಟೆ ವರೆಗೂ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದ. ಸದ್ಯ ಐಪಿಎಲ್ಗೆ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ. ಕಳೆದ ಬಾರಿಯೇ ಆಯ್ಕೆ ಆಗಬೇಕಿತ್ತು. ಈ ವರ್ಷ ಆಗಿರುವುದು ಖಂಡಿತ ಸಂತೋಷ ಕೊಡುತ್ತಿದೆ. ನಮ್ಮದು ಮಿಡಲ್ ಕ್ಲಾಸ್ ಫ್ಯಾಮಿಲಿ. ಈಗ ಅವನ ಜೀವನ ಒಳ್ಳೆಯ ರೀತಿಯಲ್ಲಿ ಪ್ರಾರಂಭವಾಗಿದೆ. ಆತನ ಜೀವನದ ಮೇಲೆಯೇ ನಮ್ಮ ಇಡೀ ಕುಟುಂಬದ ಭವಿಷ್ಯ ಇದೆ''.
ಮನ್ವಂತ್ ಕುಮಾರ್ (ETV Bharat) ''ನಾನು ಮೂಲತಃ ಮೈಸೂರಿನವ. ಮೊದಲು ಬಿಎಂಟಿಸಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ. ಕೊರೊನಾ ಆದ ನಂತರ ಕೆಲಸ ಹೋಯಿತು, ಸದ್ಯ ಮನೆಯಲ್ಲಿ ಇದ್ದೇನೆ. ಮಧ್ಯಮ ವರ್ಗದವರು ಇಂತಹ ಸಾಧನೆ ಮಾಡುವುದು ಕಷ್ಟ. ಒಂದು ಶೂ ಮತ್ತು ಬ್ಯಾಗ್ ತೆಗೆದುಕೊಳ್ಳಲೂ ಕೂಡ ಕಷ್ಟವಾಗುತ್ತಿತ್ತು. ಕೋಚ್ ಬಾಲಚಂದ್ರ ಅವರು ತುಂಬಾ ಸಹಾಯ ಮಾಡಿದ್ದಾರೆ. ತುಂಬಾ ಜನ ಸಹಕಾರ ಮಾಡಿದ್ದಾರೆ. ಸದ್ಯಕ್ಕೆ ಐಪಿಎಲ್ನಂತಹ ದೊಡ್ಡ ವೇದಿಕೆಗೆ ಆಯ್ಕೆಯಾಗಿದ್ದಾನೆ. ಮುಂದೆ ಭಾರತ ತಂಡಕ್ಕೂ ಕೂಡ ಆಯ್ಕೆ ಆಗಬೇಕು. ಕಳೆದ ಬಾರಿ 26 ಜನ ಆಟಗಾರರು ಐಪಿಎಲ್ ಹರಾಜಿನಲ್ಲಿ ಇದ್ದರು. ಅದರಲ್ಲಿ 6 ಮಂದಿಗೆ ಅವಕಾಶ ಸಿಕ್ಕಿದೆ. ಅದರಲ್ಲೂ ಮೈಸೂರಿನಿಂದ ಮೊದಲ ಬಾರಿಗೆ ನನ್ನ ಮಗನೇ ಐಪಿಎಲ್ಗೆ ಆಯ್ಕೆ ಆಗಿದ್ದಾನೆ'' ಎಂದು ಲಕ್ಷ್ಮಿಕುಮಾರ್ ಸಂತಸ ವ್ಯಕ್ತಪಡಿಸಿದರು.
ಕುಟುಂಬಸ್ಥರೊಂದಿಗೆ ಮನ್ವಂತ್ ಕುಮಾರ್ (ETV Bharat) ತಂದೆಯೊಂದಿಗೆ ಕ್ರಿಕೆಟ್ ಆಡಿಯೇ ಮಲಗುತ್ತಿದ್ದ: ''ಐಪಿಎಲ್ಗೆ ಆಯ್ಕೆ ಆಗಿರುವುದು ತುಂಬಾ ಖುಷಿಯಾಗುತ್ತಿದ. ಬಾಲ್ಯದಲ್ಲಿ ಆತ ತುಂಬಾ ತುಂಟನಿದ್ದ. ಅವರ ತಂದೆ ರಾತ್ರಿ ಡ್ಯೂಟಿ ಮುಗಿಸಿಕೊಂಡು ಬಂದರೆ, ಕೆಲಕಾಲ ಕ್ರಿಕೆಟ್ ಆಡಿಯೇ ಮಲಗುತ್ತಿದ್ದ. ನನ್ನ ದೊಡ್ಡ ಮಗನಿಗೆ ಕ್ರಿಕೆಟ್ ಆಸಕ್ತಿ ಜಾಸ್ತಿ ಇತ್ತು, ಅವನ ಸ್ಪೂರ್ತಿಯಿಂದಲೇ ಕ್ರಿಕೆಟ್ ಆಸಕ್ತಿ ಇವನಿಗೂ ಬಂತು. ನಮ್ಮ ಸುತ್ತಮುತ್ತಲಿನವರೂ ತುಂಬಾ ಸಹಾಯ ಮಾಡಿದರು. ಆತ ಯಾವ ಸಮಯದಲ್ಲೂ ಕ್ರಿಕೆಟ್ ಅಭ್ಯಾಸ ಬಿಡುತ್ತಿರಲಿಲ್ಲ. ಮುಂದೆ ಇನ್ನೂ ಚೆನ್ನಾಗಿ ಆಡಬೇಕು, ಅದೇ ನಮ್ಮ ಆಸೆ'' ಎಂದು ತಾಯಿ ಶ್ರೀದೇವಿ ಕುಮಾರ್ ನುಡಿದರು.
ಮನ್ವಂತ್ ಕುಮಾರ್ (ETV Bharat) ತಮ್ಮನಿಗೆ ಅಣ್ಣ ಹೇಮಂತ್ ಬಲ: ''ಮನ್ವಂತ್ ಜೀವನದಲ್ಲಿ ಇದು ಮೊದಲನೆಯ ಹಂತ. ಮುಂದೆ ನೋಡುವುದು ಬಹಳ ಇದೆ. ಇಲ್ಲಿ ಸಿಕ್ಕ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬೆಳೆಯಬೇಕಿತ್ತಿರುವುದು ಅವನಿಗೆ ಬಿಟ್ಟಿದ್ದು. ನಾನು ಕೂಡ ಟಿಕೆಟ್ ಆಡುತ್ತಿದ್ದೆ. ಅಂಡರ್ 16, 19, 23 ಲೀಗ್ಗಳಲ್ಲಿ ಆಡಿದ್ದೇನೆ. ಅವನಿಗೆ ಒಳ್ಳೆಯ ಅವಕಾಶ ಸಿಕ್ಕಿದೆ, ಅದನ್ನು ಉಪಯೋಗಿಸಿಕೊಳ್ಳಲಿ. ಒಂದು ದಿನ ಬ್ಯಾಟಿಂಗ್ ಅಭ್ಯಾಸ ಮಾಡಿದರೆ, ಮತ್ತೊಂದು ದಿನ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದ. ಬಾಲಚಂದ್ರ ಅವರ ಗೇಮ್ಸ್ ಕ್ರಿಕೆಟ್ ಕ್ಲಬ್ನಲ್ಲಿ ನಿತ್ಯ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ. ಯಾವುದೇ ಸಮಯದಲ್ಲಾದರೂ ಕೋಚಿಂಗ್ ನೀಡಲು ಬಾಲಚಂದ್ರ ಅವರು ಸಿದ್ಧರಿರುತ್ತಿದ್ದರು. ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ'' ಎಂದು ಸಹೋದರ ಹೇಮಂತ್ ಹೇಳಿದರು.
ಇದನ್ನೂ ಓದಿ:13 ವರ್ಷದ ವೈಭವ್ ಸೂರ್ಯವಂಶಿ IPLನಲ್ಲಿ ಆಡಲು ಅರ್ಹರೇ? ನಿಯಮ ಹೇಳುವುದೇನು?
''ನಮ್ಮ ತಂದೆ, ತಾಯಿ ಇಲ್ಲಿಯವರೆಗೆ ಬರಲು ತುಂಬಾ ಕಷ್ಟಪಟ್ಟಿದ್ದಾರೆ. ಇದನ್ನೆಲ್ಲ ಅವನು ಕೂಡ ನೋಡಿದ್ದು, ಸಾಧನೆಗಳ ಮೂಲಕ ವಾಪಸ್ ಕೊಡಲು ತಯಾರಾಗಿದ್ದಾನೆ. ಇದುವರೆಗೂ ಅಂಡರ್-14 ಝೋನ್, ನಂತರ ಅಂಡರ್-16 ಮೈಸೂರ್ ಝೋನ್ಗೆ ಆಯ್ಕೆಯಾದ. ಅಂಡರ್-19ನಲ್ಲಿ ಒಳ್ಳೆಯ ಪ್ರದರ್ಶನ ತೋರಿದ. ಈಗ ಇಂದೋರ್ನಲ್ಲಿ ಸೈಯದ್ ಮುಷ್ತಾಕ್ ಆಲಿ ಟ್ರೋಫಿ ಆಡುತ್ತಿದ್ದಾನೆ. ಅವನು ಹಾರ್ಡ್ ವರ್ಕ್ ಮಾಡುತ್ತಿದ್ದಾನೆ. ಫಲಿತಾಂಶ ದೇವರಿಗೆ ಬಿಟ್ಟಿದ್ದೇವೆ. ಕಲಿತುಕೊಳ್ಳುವುದು ಬಹಳ ಇದೆ.
ಆಯ್ಕೆ ಆದ ನಂತರ ಕಾಲ್ ಮಾಡಿದ್ದ, ಖುಷಿಯಾಯಿತು ಎಂದು ಹೇಳಿದ. ಮೊದಲ ಹಂತದಲ್ಲಿ ಅವನ ಹೆಸರು ಬರಲಿಲ್ಲ. ಎರಡನೇ ಎಕ್ಸಲೆಟರಿ ಹಂತದಲ್ಲಿ ಅವನ ಹೆಸರು ಬಂತು. ಕರ್ನಾಟಕದಿಂದ ಕೆ.ಎಲ್.ರಾಹುಲ್, ಕರುಣ್ ನಾಯರ್, ಬಿಟ್ಟರೆ ನನ್ನ ತಮ್ಮ ಆಯ್ಕೆಯಾಗಿದ್ದಾನೆ. 15 ರಿಂದ 18 ಕಿಲೋಮೀಟರ್ ಸೈಕಲ್ನಲ್ಲಿ ತೆರಳಿ ಜಿಮ್ಗೆ ಹೋಗಿ, ನಂತರ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ. ಕಷ್ಟಪಟ್ಟರೆ ಯಾವ ಹಂತಕ್ಕಾದರೂ ಹೋಗಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾನೆ'' ಎಂದು ಅಣ್ಣ ಹೇಮಂತ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮೈಸೂರು ಕ್ರಿಕೆಟರ್ಗೆ ಖುಲಾಯಿಸಿತು ಅದೃಷ್ಟ: IPL ಹರಾಜಿನಲ್ಲಿ ಡೆಲ್ಲಿ ಪಾಲಾದ ಆಲ್ರೌಂಡರ್; ಎಷ್ಟು ಮೊತ್ತಕ್ಕೆ ಗೊತ್ತಾ?