ಮೈಸೂರು:14 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಶುಕ್ರವಾರ ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿರುವ ಡಾ. ಬಿ. ರಮ್ಯಾ ಹಾಗೂ ಆರ್. ರಘು ಅವರು ಮಾನವ ಮಂಟಪದ ಆಶ್ರಯದಲ್ಲಿ ನಗರದ ಗೋಕುಲಂನ ಶ್ಯಾಗಲೆ ಹೌಸ್ನಲ್ಲಿ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾದರು.
ಚಿತ್ರದುರ್ಗದ, ಭೋವಿ ಜನಾಂಗದ ರಮ್ಯಾ ಹಾಗೂ ಮೈಸೂರು ತಾಲ್ಲೂಕಿನ ನಾಗನಹಳ್ಳಿ ಗ್ರಾಮದ, ದಲಿತರಾದ ರಘು ಅವರು ಎಂ.ಎ ಓದುವಾಗಿನಿಂದ ಪ್ರೀತಿಸಿದವರು. ಬಸವ ಜಯಂತಿಯಂದು ಮದುವೆಯಾದ ಅವರಿಗೆ ವಿವಾಹ ಸಂಹಿತೆಯನ್ನು ಉಗ್ರನರಸಿಂಹೇಗೌಡ ಬೋಧಿಸಿದರು. ಬಳಿಕ ಮಾತನಾಡಿದ ಅವರು, ''ಸಾಲ ಮಾಡಿ ಮದುವೆ ಮಾಡಿದವರು ಕೆಟ್ಟು ಹೋಗುತ್ತಾರೆ. ಯಾರಿಗೋ ತೋರಿಸಲು ದೊಡ್ಡ ಚೌಟ್ರಿಯಲ್ಲಿ ಮದುವೆ ಮಾಡಿ ಮೈಸುಟ್ಟುಕೊಳ್ಳುತ್ತಾರೆ. ಆರೋಗ್ಯಕರ ಸಮಾಜಕ್ಕೆ ಪ್ರೇಮ ವಿವಾಹಗಳು, ಅಂತರ್ಜಾತಿ ವಿವಾಹಗಳು ಹೆಚ್ಚಬೇಕು'' ಎಂದರು.
ಕುವೆಂಪು ಅವರ ಮಂತ್ರ ಮಾಂಗಲ್ಯ ಮದುವೆಯ ಪ್ರಮಾಣ ವಚನವನ್ನು ಬೋಧಿಸಿದ ಮಾನವ ಮಂಟಪದ ಸಂಚಾಲಕ ಡಾ. ಕಾಳಚನ್ನೇಗೌಡ ಮಾತನಾಡಿ, ''ಅಂತರ್ಜಾತಿ ಮದುವೆಗಳನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ. ಮೊದಲಿನಷ್ಟು ವಿರೋಧವಿಲ್ಲ. ಸುತ್ತೂರು, ಧರ್ಮಸ್ಥಳ, ಚುಂಚನಗಿರಿಯಲ್ಲಿ ಸರಳವಾಗಿ ಮದುವೆಗಳಾಗುತ್ತಿವೆ. ಸರಳವಾಗಿ ಮದುವೆಯಾದರೆ ಜನರು ಹಿಯಾಳಿಸುತ್ತಾರೆ ಎಂಬ ಯೋಚನೆ ಬಿಡಿ'' ಎಂದು ಸಲಹೆ ನೀಡಿದರು.
ಲೇಖಕ ಡಾ. ಮುಜಾಫರ್ ಅಸಾದಿ ಮಾತನಾಡಿ, ''ಇವರಿಬ್ಬರೂ ನನ್ನ ಶಿಷ್ಯರು. ನನ್ನ ಮಾರ್ಗದರ್ಶನದಲ್ಲಿ ರಮ್ಯಾ ಪಿಎಚ್.ಡಿ ಮಾಡಿದ್ದಾರೆ. ಕನ್ನಂಬಾಡಿ ಅಣೆಕಟ್ಟೆಯಂತೆ ಗಟ್ಟಿ ಜೀವನ ನಡೆಸಿ, ಸಮೃದ್ಧಿವಾಗಿ ಬಾಳಿ'' ಎಂದು ಹಾರೈಸಿದರು.
ಕವಯಿತ್ರಿ ಡಾ.ಲತಾ ಮೈಸೂರು ಮಾತನಾಡಿ, ''ಮದುವೆಯಾಗುವುದರಿಂದ ದೇಹ, ಮನಸು, ಆತ್ಮ ಒಂದಾಗುತ್ತವೆ. ಇರುವೆಯಿಂದ ಹಿಡಿದು ಎಲ್ಲಾ ಪ್ರಾಣಿಗಳು ತಮಗೆ ಇಷ್ಟವಾದ ಸಂಗಾತಿಗಳೊಂದಿಗೆ ಸೇರಿ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ, ಪ್ರೀತಿಸಿ ಮದುವೆಯಾಗುವವರ ನಡುವೆ ಜಾತಿ ಗೋಡೆ ಏಕೆ'' ಎಂದು ಪ್ರಶ್ನಿಸಿದರು.