ಮಂಗಳೂರು:ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ನ ಚಾಲಕ ಮತ್ತು ನಿರ್ವಾಹಕ ಸ್ಪಂಧಿಸಿದ್ದು, ಬಸ್ ಅನ್ನು ಎಲ್ಲಿಯೂ ನಿಲ್ಲಿಸದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೇ ಅಲ್ಲ, ಚಾಲಕನು ವಿದ್ಯಾರ್ಥಿನಿಯನ್ನು ಹೊತ್ತು ಆಸ್ಪತ್ರೆಯ ಒಳಗೆ ಸಾಗಿಸಿದರು. ಕೂಡಲೇ ಆಕೆಯನ್ನು ಚಿಕಿತ್ಸೆಗೆ ದಾಖಲಿಸಲಾಯಿತು. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನಿದು ಘಟನೆ:ಕೃಷ್ಣಪ್ರಸಾದ್ ಎಂಬ ಹೆಸರಿನ ಖಾಸಗಿ ಬಸ್ಸಿನಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಂಗಳಾದೇವಿ-ಕುಂಜತ್ತಬೈಲ್ ನಡುವೆ ಸಂಚರಿಸುವ ರೂಟ್ ನಂ.13F ಕೃಷ್ಣಪ್ರಸಾದ್ ಬಸ್ ಎಂದಿನಂತೆ ಕೂಳೂರು ಮಾರ್ಗವಾಗಿ ಮಂಗಳಾದೇವಿ ಕಡೆಗೆ ಸಂಚರಿಸುತ್ತಿತ್ತು. ಬಂಗ್ರಕೂಳೂರಿನಲ್ಲಿ 10-15 ಮಂದಿ ಯೆನಪೋಯ ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ. ಬಸ್ ಕೊಂಚ ಮುಂದೆ ಹೋಗಿ ಇನ್ನೇನು ಕೊಟ್ಟಾರ ತಲುಪುತ್ತಿದ್ದಂತೆ ಏಕಾಏಕಿ ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಡ್ರೈವರ್ ಗಜೇಂದ್ರ ಕುಂದರ್ ಮತ್ತು ನಿರ್ವಾಹಕರಾದ ಮಹೇಶ್ ಪೂಜಾರಿ ಹಾಗೂ ಸುರೇಶ್ ಬಸ್ ಅನ್ನು ನೇರ ಆಸ್ಪತ್ರೆಗೆ ಕೊಂಡೊಯ್ಯುವ ನಿರ್ಧಾರ ಮಾಡಿದರು.