ಚಿಕ್ಕಮಗಳೂರು: ಆರು ಮಂದಿ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇಂದು ಶರಣಾಗತರಾಗಲಿದ್ದಾರೆ. ಕೊನೆ ಕ್ಷಣದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಡಿಢೀರ್ ವರ್ಗಾವಣೆಗೊಂಡಿದೆ. ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ. ಮತ್ತು ರಾಯಚೂರಿನ ಮಾರಪ್ಪ ಅರೋಲಿ ಶರಣಾಗತಿ ಆಗುತ್ತಿರುವ ನಕ್ಸಲರಾಗಿದ್ದಾರೆ.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಆಶ್ರಯದಲ್ಲಿ ಆರು ಮಂದಿ ನಕ್ಸಲರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಶರಣಾಗುತ್ತಾರೆ ಎಂದು ಎನ್ನಲಾಗಿತ್ತು. ಆದರೆ ಸರ್ಕಾರದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಮುಂದೆ ಶರಣಾಗತಿ ಪ್ರಕ್ರಿಯೆ ನಡೆಯಬೇಕೆಂಬ ಉದ್ದೇಶದಿಂದ ಅಂತಿಮ ಕ್ಷಣದಲ್ಲಿ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಯಾಗಿದೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರ ಕುರಿತಂತೆ ಶಾಂತಿಗಾಗಿ ನಾಗರಿಕ ವೇದಿಕೆಯ ಪ್ರಮುಖ ಮುಖಂಡ ಕೆ.ಎಲ್. ಅಶೋಕ್ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ಶೃಂಗೇರಿಯಿಂದ ಹೊರಟ ನಕ್ಸಲರ ತಂಡ ಕಣತಿ ಸಮೀಪ ಬರುತ್ತಿದ್ದಂತೆ ಬೆಂಗಳೂರಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅವರ ಸಮ್ಮುಖದಲ್ಲೇ ಶರಣಾಗತಿ ಆಗಬೇಕು ಎಂಬ ಸಂದೇಶದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನಕ್ಸಲ್ ಹೋರಾಟ ಸಂಧ್ಯಾಕಾಲದೆಡೆಗೆ: ಮಾಜಿ ನಕ್ಸಲೀಯರಿಗೆ ಸಿಗಬೇಕಿದೆ ಸರ್ಕಾರದ ಪ್ಯಾಕೇಜ್