ಬೆಳಗಾವಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳಿ ಬಂದಿರೋದು ವೈಯಕ್ತಿಕವಾಗಿ ಬಹಳಷ್ಟು ಖುಷಿ ತಂದಿದೆ. ಅಲ್ಲದೇ ಇದರಿಂದ ಪಕ್ಷಕ್ಕೂ ಬಲ ಬಂದಿದೆ ಎಂದು ಸಂಸದೆ ಮಂಗಲಾ ಅಂಗಡಿ ಅವರು ಹೇಳಿದ್ದಾರೆ.
ಬೆಳಗಾವಿಯ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಷ್ಟು ದಿನ ನಾವು ಏನೋ ಕಳೆದುಕೊಂಡಂತೆ ಆಗಿತ್ತು. ಅವರು ದೆಹಲಿಗೆ ಹೋಗಿದ್ದು ಗೊತ್ತಿತ್ತು. ಆದರೆ, ಪಕ್ಷಕ್ಕೆ ಸೇರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ಅವರ ಜೊತೆ ನಾವು ಚರ್ಚೆ ಕೂಡ ಮಾಡಿರಲಿಲ್ಲ ಎಂದಿದ್ದಾರೆ.
ರಾಜಕೀಯವಾಗಿ ಏನು ಆಗುತ್ತದೆ ನೋಡೋಣ. ಆದರೆ ಅಂಗಡಿ ಫ್ಯಾಮಿಲಿಗೆ ಟಿಕೆಟ್ ಕೊಡುವುದು ಫಿಕ್ಸ್ ಎಂದು ಹೇಳಿದ್ದಾರೆ. ನಿಮಗೆ ಟಿಕೆಟ್ ಕೇಳುತ್ತಿರಾ ಅಥವಾ ಮಗಳಿಗೆ ಟಿಕೆಟ್ ಕೇಳುತ್ತಿರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಒಟ್ಟಿನಲ್ಲಿ ಅಂಗಡಿ ಫ್ಯಾಮಿಲಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರನ್ನು ಭೇಟಿಯಾಗಿ ಬೇಡಿಕೆ ಇಡುತ್ತೇವೆ. ಟಿಕೆಟ್ ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ಮುಂದೆ ಏನಾಗುತ್ತೋ ನೋಡೋಣ ಎಂದು ಹೇಳಿದ್ದಾರೆ.
ಹಾವೇರಿ, ಬೆಳಗಾವಿ ಲೋಕಸಭೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಶೆಟ್ಟರ್ ಷರತ್ತು ವಿಧಿಸಿ ಬಿಜೆಪಿಗೆ ಮರಳಿದ್ದಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ಅದೇನು ಗೊತ್ತಿಲ್ಲ. ಇದು ಕೇವಲ ಟಿವಿಗಳಲ್ಲಿ ಮಾತ್ರ ಬರುತ್ತಿದೆ. ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲಿ ಸಿನಿಯರ್ ಲೀಡರ್, ಮುಖ್ಯಮಂತ್ರಿ ಆಗಿದ್ದವರು. ಏನೋ ಒಂದು ಕಾರಣಕ್ಕೆ ಕಾಂಗ್ರೆಸ್ಗೆ ಹೋಗಿದ್ದರು. ತಮ್ಮ ಮನೆಗೆ ಅವರು ಈಗ ವಾಪಸ್ ಬಂದಿದ್ದು ತುಂಬಾ ಖುಷಿಯಾಗಿದೆ ಎಂದು ಮಂಗಲ ಅಂಗಡಿ ಅವರು ತಿಳಿಸಿದ್ದಾರೆ.
ಇನ್ನು ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ, ರಾಮಮಂದಿರ ವಿಷಯದಿಂದಾಗಿ ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಶೆಟ್ಟರ್ ಅವರು ಮರಳಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಪಕ್ಷಕ್ಕೆ ಮತ್ತಷ್ಟು ಅನುಕೂಲ ಆಗಲಿದೆ ಎಂದು ಮಂಗಲ ಅಂಗಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಬೀಗರ ಮನೆಯಲ್ಲಿ ಮನೆ ಮಾಡಿದ ಸಂಭ್ರಮ : ಅತ್ತ ದೆಹಲಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿ ಸೇರ್ಪಡೆಯಾಗುತ್ತಿದ್ದಂತೆ ಬೆಳಗಾವಿಯ ಅವರ ಬೀಗರಾದ ಸಂಸದೆ ಮಂಗಲಾ ಅಂಗಡಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್, ಶ್ರದ್ಧಾ ಶೆಟ್ಟರ್ ಪರಸ್ಪರ ಸಿಹಿ ತಿನ್ನಿಸಿ ಖುಷಿ ಪಟ್ಟರು.
ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಮರಳಿ ಗೂಡಿಗೆ ಶೆಟ್ಟರ್- ಪುತ್ರ ಸಂಕಲ್ಪ ಶೆಟ್ಟರ್ ಹೇಳಿದ್ದೇನು..?:ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮತ್ತು ಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸುವ ಉದ್ದೇಶದಿಂದ ತಂದೆಯವರು ಬಿಜೆಪಿಗೆ ಮರಳಿ ಬಂದಿದ್ದಾರೆ ಎಂದು ಸಂಕಲ್ಪ ಶೆಟ್ಟರ್ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಸಂಘ ಕಾಲದಿಂದ ನಮ್ಮ ಅಜ್ಜ, ತಂದೆ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ, ವಾಪಸ್ ಬಿಜೆಪಿ ಮನೆಗೆ ಬಂದಿರೋದು ಖುಷಿಯ ವಿಚಾರ. ಇವತ್ತು ಬೆಳಗ್ಗೆ ದೇಶದ ಗೃಹ ಮಂತ್ರಿ ಅಮಿತ್ ಶಾ ಅವರ ಜೊತೆ ಸುದೀರ್ಘವಾದ ಮಾತುಕತೆ ಆಗಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಅದನ್ನ ಪರಿಹಾರ ಮಾಡುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಸಂಕಲ್ಪ ಶೆಟ್ಟರ್ ಅವರಿಗೆ ಹಾವೇರಿ ಲೋಕಸಭೆ ಟಿಕೆಟ್ ಬೇಡಿಕೆ ಇಡಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಷರತ್ತು ಇಲ್ಲದೇ ತಂದೆಯವರು ಬಿಜೆಪಿ ಸೇರಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡುವ ಏಕೈಕ ಉದ್ದೇಶ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಟಿಕೆಟ್ ವಿಚಾರಕ್ಕೆ ನಾನೇನೂ ಹೇಳಲಾರೆ: ಲೋಕಸಭೆ ಟಿಕೆಟ್ ಮತ್ತು ನಮ್ಮ ಕುಟುಂಬದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಕೇವಲ ಪಕ್ಷ ಸಂಘಟನೆ ಬಗ್ಗೆ ಮಾತ್ರ ಚರ್ಚೆಯಾಗಿದೆ. ಊಹಾಪೋಹದ ಪ್ರಶ್ನೆಗಳಿಗೆ ಯಾವುದೇ ರೀತಿ ಉತ್ತರ ಕೊಡಬಾರದು ಎಂದು ನಮ್ಮ ತಂದೆ ಯಾವಾಗಲೂ ಹೇಳುತ್ತಾರೆ. ಹಾಗಾಗಿ, ಟಿಕೆಟ್ ವಿಚಾರಕ್ಕೆ ನಾನೇನೂ ಹೇಳಲಾರೆ ಎಂದಿದ್ದಾರೆ.
ಟಿಕೆಟ್ ಸಿಗದೇ ಇದ್ದಾಗ ಶೆಟ್ಟರ್ ಅವರಿಗೆ ನಾವು ಟಿಕೆಟ್ ನೀಡಿದ್ದೆವು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಕಲ್ಪ ಅವರು, ಏಳೆಂಟು ಜಿಲ್ಲೆಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಪ್ರವಾಸ ಮಾಡಿದಾಗ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಬರಬೇಕು ಎಂಬ ಆಸೆಯನ್ನು ಎಲ್ಲರೂ ವ್ಯಕ್ತಪಡಿಸಿದ್ದರು. ಈಗ ಮರಳಿ ಬಂದಿದ್ದಾರೆ. ಕಾಂಗ್ರೆಸ್ ಎಂಎಲ್ಸಿಯಾಗಿ ಉತ್ತಮ ಕೆಲಸ ಮಾಡಿದ್ದರು. ಈಗ ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಗದೀಶ್ ಶೆಟ್ಟರ್ ನಡೆಗೆ ಡಿಕೆಶಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಂಕಲ್ಪ ಶೆಟ್ಟರ್ ಅವರು, ಜಗದೀಶ್ ಶೆಟ್ಟರ್ ಅವರಿಗೆ ಮಿನಿಸ್ಟರ್ ಆಗಬೇಕು ಎನ್ನುವುದು ಇದ್ದಿದ್ದರೆ ಯಾವಾಗಲೋ ಆಗುತ್ತಿದ್ದರು. ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಈಗ ಮರಳಿ ಬಿಜೆಪಿಗೆ ಬಂದಿದ್ದಾರೆ, ಖುಷಿಯಾಗಿದೆ ಎಂದಿದ್ದಾರೆ.
ಶೆಟ್ಟರ್ ಸೊಸೆ ಹೇಳಿದ್ದೇನು..?:ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗಿರೋದು ತುಂಬಾ ಖುಷಿಯಾಗಿದೆ ಎಂದು ಅವರ ಸೊಸೆ ಶ್ರದ್ಧಾ ಶೆಟ್ಟರ್ ಹೇಳಿದ್ದಾರೆ. ನಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ, ಇಡೀ ಬಿಜೆಪಿ ಕಾರ್ಯಕರ್ತರಿಗೆ ಖುಷಿ ತಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇದು ಸಂತೋಷದ ಸಂದರ್ಭ ಎಂದು ಹೇಳಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರದ್ದಾ ಶೆಟ್ಟರ್, ನನ್ನ ಸ್ಪರ್ಧೆ ಬಗ್ಗೆ ನಾನು ಇನ್ನೂ ಚರ್ಚೆ ಮಾಡಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬದ್ಧ. ಇನ್ನು ಬೇರೆಯವರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ನಮ್ಮ ಕುಟುಂಬಕ್ಕೆ ಸಿಕ್ಕರೂ ಕೆಲಸ ಮಾಡುತ್ತೇವೆ. ಹೈಕಮಾಂಡ್ ಏನೂ ನಿರ್ಧಾರ ತೆಗೆದುಕೊಳ್ಳುತ್ತೆ ಅದಕ್ಕೆ ನಾನು ಬದ್ದ ಎಂದು ಶ್ರದ್ಧಾ ಶೆಟ್ಟರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ :ಶೆಟ್ಟರ್ ಮತ್ತೆ ಬಿಜೆಪಿಗೆ ಸೇರಿ ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ: ಡಿಸಿಎಂ ಡಿಕೆಶಿ ಬೇಸರ