ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮೈದಾನದ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ಮಾಣಿಕ್ ಷಾ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ರಾಜ್ಯಪಾಲರು ಮುಖ್ಯ ಅತಿಥಿಗಳಾಗಿ ಭಾಗಿವಹಿಸಲಿದ್ದಾರೆ. ಧ್ವಜಾರೋಹಣ, ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ನಗರದ ಎಲ್ಲಾ ವಿಭಾಗಗಳ 9 ಡಿಸಿಪಿ, 16 ಎಸಿಪಿ, 46 ಪಿಐ, 109 ಪಿಎಸ್ಐ, 97 ಎಎಸ್ಐ, 414 ಕಾನ್‌ಸ್ಟೇಬಲ್ ಸೇರಿ ಒಟ್ಟು 575 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೆ ಮೈದಾನದಲ್ಲಿ 10 ಕೆಎಸ್ಆರ್ಪಿ ತುಕಡಿಗಳು, 2 ಅಗ್ನಿಶಾಮಕ ವಾಹನಗಳು, 1 ಕ್ಷಿಪ್ರ ಕಾರ್ಯಾಚರಣೆ ಪಡೆ (ಕ್ಯೂಆರ್ಟಿ)ಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಗರುಡ ಪಡೆಗಳನ್ನು ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ. ಮೈದಾನದ ಸುತ್ತಮುತ್ತ ನಿಗಾ ವಹಿಸಲು 100 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರ ತಪಾಸಣೆ ನಡೆಸಲು 3 ಬ್ಯಾಗೆಜ್ ಸ್ಕ್ಯಾನರ್, 20 ಡಿಎಫ್ಎಂಡಿ, 40 ಹೆಚ್ಹೆಚ್ಎಂಡಿಗಳನ್ನು ಅಳವಡಿಸಲಾಗಿದೆ.
ಮೈದಾನಕ್ಕೆ ಈ ವಸ್ತುಗಳ ನಿಷೇಧ:ಸಿಗರೇಟ್, ಬೆಂಕಿಪಟ್ಟಣ, ಕರಪತ್ರ, ಬಣ್ಣದ ದ್ರಾವಣಗಳು, ನೀರಿನ ಬಾಟೆಲ್, ಶಸ್ತ್ರಾಸ್ತ್ರಗಳು, ಹರಿತವಾದ ಆಯುಧ, ಚಾಕು-ಚೂರಿ, ಕಪ್ಪು ಕರವಸ್ತ್ರ, ತಿಂಡಿ-ತಿನಿಸುಗಳು, ಪಟಾಕಿ ಹಾಗೂ ಇನ್ನಿತರ ಸ್ಫೋಟಕ ವಸ್ತುಗಳನ್ನು ತರದಂತೆ ನಿಷೇಧಿಸಲಾಗಿದೆ. ಅಂದು ಬೆಳಗ್ಗೆ ಸಮಾರಂಭಕ್ಕೆ ಅಗಮಿಸುವರು 8.30ರ ಒಳಗೆ ಬರಬೇಕು. ತಡವಾಗಿ ಬಂದರೆ ಅಂತಹವರಿಗೆ ಪ್ರವೇಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವವರು ತಮ್ಮ ಕಾರುಗಳನ್ನು ಪಾಸ್‌ನಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ನಿಲುಗಡೆ ಮಾಡುವಂತೆ ಕೋರಲಾಗಿದೆ. ತುರ್ತು ಸೇವಾ ವಾಹನಗಳಾದ ಆಂಬ್ಯುಲೆನ್ಸ್, ಅಗ್ನಿ ಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆಎಸ್ಆರ್ಪಿ, ಸಿಆರ್ಟಿ, ಬಿಬಿಎಂಪಿ ಹಾಗೂ ಪಿಡಬ್ಲ್ಯೂಡಿ ವಾಹನಗಳು ಪ್ರವೇಶ ದ್ವಾರ 2ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ:ಜ.26ರ ಬೆಳಗ್ಗೆ 8.30ರಿಂದ ಬೆಳಗ್ಗೆ 10.30ರ ವರೆಗೆ ಕಬ್ಬನ್ ರಸ್ತೆಯಲ್ಲಿ ಬಿ ಆರ್ ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಿ ಈ ಕೆಳಕಂಡಂತೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿ ರಸ್ತೆ ಸಫೀನಾ ಪ್ಲಾಜಾ - ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ- ಆಲೀಸ್ ಸರ್ಕಲ್- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.
ಈ ರಸ್ತೆಯಲ್ಲಿ ವಾಹನ ನಿಲ್ಲಿಸಬೇಡಿ:ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ & ಕಬ್ಬನ್ ರಸ್ತೆ ಜಂಕ್ಷನ್ ವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ದಾವೋಸ್ ಶೃಂಗಸಭೆಯಲ್ಲಿ 23 ಸಾವಿರ ಕೋಟಿಗೂ ಹೆಚ್ಚಿನ ಬಂಡವಾಳ ಆಕರ್ಷಿಸುವಲ್ಲಿ ಕರ್ನಾಟಕ ಸಫಲ