ಮಂಡ್ಯ: 'ಮಂಡ್ಯ ಟು ಇಂಡಿಯಾ' ಧ್ಯೇಯದೊಂದಿಗೆ ನಡೆದ ಬೃಹತ್ ಉದ್ಯೋಗ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ ಕಳೆದುಕೊಂಡ ಯುವತಿ, ಎರಡೂ ಕಣ್ಣು ಕಾಣದ ಯುವಕ ಸೇರಿದಂತೆ ನೂರಾರು ಯುವತಿ - ಯುವಕರಿಗೆ ಉದ್ಯೋಗ ಸಿಕ್ಕಿದ್ದು, ಕೆಲಸ ಪಡೆದವರಿಗೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಪ್ರಮಾಣಪತ್ರ ವಿತರಿಸಿದರು.
ಈ ಕುರಿತು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಮಾತನಾಡಿ," ಉದ್ಯೋಗ ಮೇಳದಲ್ಲಿ 150ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗ ಮೇಳದಲ್ಲಿ 5 ಸಾವಿರ ರಿಜಿಸ್ಟ್ರೇಷನ್ ಆಗಿವೆ. ಇದು ಅಂತ್ಯ ಅಲ್ಲ, ಆರಂಭ. ಎಲ್ಲರೂ ಈ ಭರವಸೆ ಇಟ್ಟುಕೊಳ್ಳಬೇಕು. ಹೊರಗಡೆ ಹೋಗಲು ಕೆಲವರಿಗೆ ವಿಶ್ವಾಸದ ಕೊರತೆ ಇದೆ. ಎಲ್ಲರಿಗೂ ರಾಜ್ಯದಲ್ಲಿಯೇ ಕೆಲಸ ಕೊಡಿಸಲು ಸಾಧ್ಯವಿಲ್ಲ. ಉದ್ಯೋಗ ಮೇಳದಲ್ಲಿ ಸಾವಿರ ಕುಟುಂಬಗಳಿಗೆ ಉದ್ಯೋಗ ದೊರಕುತ್ತಿದೆ" ಎಂದರು.
ಮಂಡ್ಯ ಟು ಇಂಡಿಯಾ ಉದ್ಯೋಗ ಮೇಳ (ETV Bharat) "ಜಿಲ್ಲೆಗೆ ಕಾರ್ಖಾನೆಗಳನ್ನು ತರಲು ಪ್ರಯತ್ನ ಮಾಡುತ್ತೇನೆ, ಇದಕ್ಕೆ ಸಮಯ ಬೇಕಿದೆ. ರಾಜ್ಯ ರಾಜ್ಯಗಳ ಮಧ್ಯೆ ಪೈಪೋಟಿ ಇದೆ. ಹೊಸ ಉದ್ಯಮ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನಮಗೆ ದೇವರ ಮೇಲೆ ಬಹಳ ವಿಶ್ವಾಸವಿದೆ.
ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲೆ ಇದೆ. ಒಂದು ಸಾವಿರ ವಿಶೇಷಚೇತನರಿಗೆ ನಾನು ಸಿಎಂ ಆದಾಗ ಉದ್ಯೋಗ ಕೊಡಿಸಿದ್ದೆ. ಅನಂತರ ಸರ್ಕಾರಗಳು ಅವರ ಉದ್ಯೋಗ ಖಾಯಂ ಮಾಡಿಲ್ಲ. ಉದ್ಯೋಗ ಎಲ್ಲೇ ಸಿಕ್ಕರೂ ಹೋಗಿ ಕೆಲಸ ಮಾಡಿ. ನಮಗೂ ಈ ಹಿಂದೆ ದೆಹಲಿಯಲ್ಲಿ ಕೆಲಸ ಮಾಡಲು ಅಳಕು ಇತ್ತು. ಆದರೆ ಅದಕ್ಕೆ ನಾವು ಹೊಂದಿಕೊಳ್ಳಬೇಕು" ಎಂದು ಸಲಹೆ ನೀಡಿದರು.
"ನೀವು ಕೊಟ್ಟಿರುವ ಶಕ್ತಿಯನ್ನ ನಿಮಗೆ ಧಾರೆ ಎರೆಯುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ. ನಾನು ಐದು ವರ್ಷಗಳ ಕಾಲ ಸಿಎಂ ಆಗಿದ್ದರೇ ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತಿದ್ದೆ. ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕಾಗಿ 15 ಸಾವಿರ ಕೋಟಿ ಹಣ ಬೇಕಿದೆ. ಯಾವುದೇ ಸಮಸ್ಯೆ ಬಂದರೂ ಯಾರು ಧೃತಿಗೆಡಬೇಡಿ" ಎಂದು ಧೈರ್ಯ ತುಂಬಿದರು.
ಇದನ್ನೂ ಓದಿ:2028ರ ವರೆಗೆ ಈ ಸರ್ಕಾರ ನಡೆಯಲ್ಲ, ಮತ್ತೆ ನಾನೇ ಸಿಎಂ: ಹೆಚ್.ಡಿ. ಕುಮಾರಸ್ವಾಮಿ