ಮಂಡ್ಯ:ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಸಂಬಂಧ ಜಿಲ್ಲೆಯ ಪಾಂಡವಪುರ, ಬೆಳ್ಳೂರು ಮತ್ತು ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಬನ್ನೂರಿನವರಾದ ರಾಮಕೃಷ್ಣ, ಗುರು, ಮೈಸೂರಿನ ಸೋಮಶೇಖರ್, ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ನವೀನ್ ಹೆಚ್.ಕೆ. ಕೆ.ಆರ್.ನಗರದ ಶಂಕರ ಜಿ.ಎನ್ ಮತ್ತು ಪಾಂಡವಪುರ ತಾಲೂಕಿನ ಹರಳಹಳ್ಳಿಯ ಜಬ್ಬರ್ ಬಂಧಿತ ಆರೋಪಿಗಳು.
ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಎಸ್ ಬಾಲದಂಡಿ ಮಾತನಾಡಿ, ಭ್ರೂಣ ಪತ್ತೆ ಮತ್ತು ಹತ್ಯೆ ಸಂಬಂಧ ಪಾಂಡವಪುರ, ಬೆಳ್ಳೂರು ಮತ್ತು ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಈಗ ಮತ್ತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರಾಮಕೃಷ್ಣ, ಗುರು, ಸೋಮಶೇಖರ್ ಮೈಸೂರು ಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ಗರ್ಭಪಾತ ಮಾಡ್ತಿದ್ರು. ಆರೋಪಿ ರಾಮಕೃಷ್ಣ ಬಳಿಯಿಂದ ಎರಡು ಸ್ಕ್ಯಾನಿಂಗ್ ಮಷಿನ್ ವಶಕ್ಕೆ ಪಡೆಯಲಾಗಿದೆ. ಒಂದು ವರ್ಷದಲ್ಲಿ 36 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.