ಮಂಡ್ಯ: ಜಿಲ್ಲೆಯ ಪಾಂಡವಪುರ ಪಟ್ಟಣದ ಬೈಕ್ ಮೆಕ್ಯಾನಿಕ್ ಅಲ್ತಾಫ್ ಎಂಬವರು ಕೇರಳದ ತಿರುವೋಣಂ ಹಬ್ಬದ ಪ್ರಯುಕ್ತ ನಡೆದ 25 ಕೋಟಿ ರೂ. ಮೌಲ್ಯದ ಬಂಪರ್ ಲಾಟರಿ ಗೆದ್ದಿದ್ದಾರೆ. ಪರಿಚಯಸ್ಥರ ಭೇಟಿಗೆ ತೆರಳಿದ್ದಾಗ ಖರೀದಿಸಿದ್ದ ಲಾಟರಿ ಟಿಕೆಟ್ ಇವರ ಬದುಕು ಬದಲಿಸಿದೆ. ತೆರಿಗೆ ಮೊತ್ತ ಕಡಿತವಾಗಿ 12 ಕೋಟಿ ರೂ. ಲಾಟರಿ ಹಣವನ್ನು ಅಲ್ತಾಫ್ ಪಡೆಯಲಿದ್ದಾರೆ.
ಲಾಟರಿ ಗೆದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳದ ತಿರುವೋಣಂ ಕಚೇರಿ ತಲುಪಿದ್ದಾರೆ. ಲಾಟರಿ ಹಣ ಪಡೆಯುವ ಪ್ರಕ್ರಿಯೆ ಪೂರೈಸಿ ಹಣ ಪಡೆದುಕೊಳ್ಳಲಿದ್ದಾರೆ.
ಈ ಕುರಿತು ಕೇರಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನ್ನ ಸ್ನೇಹಿತನ ಮನೆಗೆ ಚಿಕ್ಕವಯಸ್ಸಿನಿಂದಲೂ ಬರುತ್ತಿದ್ದೆ. ಹೀಗೆ ಬಂದಾಗಲೆಲ್ಲ ಲಾಟರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದೆ. ನಾನು 10 ವರ್ಷದಿಂದ ಬಂಪರ್ ಟಿಕೆಟ್ ಖರೀದಿಸುತ್ತಿದ್ದೇನೆ. ಲಾಟರಿ ಗೆಲ್ಲವು ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಅಲ್ಲಾಹುವಿನ ಕೃಪೆಯಿಂದ ಅದೃಷ್ಟ ಕುಲಾಯಿಸಿದೆ" ಎಂದರು.