ಕರ್ನಾಟಕ

karnataka

ETV Bharat / state

ಮಂಡ್ಯದಿಂದ ಹೆಚ್​ಡಿಕೆ ಸ್ಪರ್ಧೆ ಬಹುತೇಕ ಖಚಿತ: ಸಂಜೆಯೊಳಗೆ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ? - Mandya Lok Sabha Constituency - MANDYA LOK SABHA CONSTITUENCY

ಮಂಡ್ಯದಿಂದ ಪುಟ್ಟರಾಜು ಅವರನ್ನು ಕಣಕ್ಕಿಳಿಸಬೇಕೆನ್ನುವ ಇಚ್ಛೆ ಇದ್ದರೂ, ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಸಲಹೆ ಹಾಗೂ ಒತ್ತಾಯದ ಮೇರೆಗೆ ತಾವೇ ಸ್ಪರ್ಧಿಸಲು ಹೆಚ್‌.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

H D Kumarswamy and JDS party symbol
ಹೆಚ್​ ಡಿ ಕುಮಾರಸ್ವಾಮಿ ಜೆಡಿಎಸ್​ ಪಕ್ಷದ ಚಿಹ್ನೆ

By ETV Bharat Karnataka Team

Published : Mar 25, 2024, 12:35 PM IST

ಬೆಂಗಳೂರು: ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ದೆಹಲಿ ರಾಜಕಾರಣದಲ್ಲಿ ಆಸಕ್ತಿ ಇಲ್ಲದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ತಳ್ಳಿಹಾಕಲಾಗದೇ, ಚುನಾವಣಾ ಕಣ್ಕಕಳಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮಂಡ್ಯ ಸೇರಿದಂತೆ ಮೂರು ಕ್ಷೇತ್ರಗಳಿಂದ ಕಣಕ್ಕಿಳಿಯಲು ಕುಮಾರಸ್ವಾಮಿ ಅವರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಒತ್ತಡವಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರಿದ ನಂತರ ಪ್ರಧಾನಿಯನ್ನು ಭೇಟಿ ಮಾಡಿದ ಸಂದರ್ಭದಲ್ಲೆಲ್ಲಾ ಕೇಂದ್ರ ರಾಜಕಾರಣಕ್ಕೆ ಬರುವಂತೆ ಸಲಹೆ ನೀಡಿರುವುದಲ್ಲದೆ, ಬಹಿರಂಗಪಡಿಸಲಾಗದ ಕೆಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಜೆಡಿಎಸ್‌ಗೆ ಯಾವ ಕ್ಷೇತ್ರಗಳು ಎಂಬುದು ನಿಗದಿಯಾಗಿವೆ. ತಮ್ಮ ಪಕ್ಷಕ್ಕೆ ದಕ್ಕಿರುವ ಕ್ಷೇತ್ರಗಳಲ್ಲಿ ಹೆಚ್​ಡಿಕೆ ಚುನಾವಣಾ ಸಭೆಗಳನ್ನು ನಡೆಸಿದ್ದಾರೆ.

ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ:ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ಬಾರಿ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿರುವ ಕುಮಾರಸ್ವಾಮಿ, ಅಭ್ಯರ್ಥಿ ಹೆಸರು ಬಹಿರಂಗಪಡಿಸಿಲ್ಲ. ಅವರ ಮನಸ್ಸಿನಲ್ಲಿ ಪಾಂಡವಪುರದ ಮಾಜಿ ಸಂಸದ ಪುಟ್ಟರಾಜು ಅವರನ್ನು ಕಣಕ್ಕಿಳಿಸಬೇಕೆಂಬ ಇಚ್ಛೆಯಿದೆ. ಆದರೆ, ಪ್ರಧಾನಿ ಮಾತನ್ನು ತಳ್ಳಿಹಾಕಲು ಸಾಧ್ಯವಾಗುತ್ತಿಲ್ಲ. ಕುಮಾರಸ್ವಾಮಿ ಕೂಡ ತಮ್ಮ ಪಕ್ಷದ ಪಾಲಿನ ಕ್ಷೇತ್ರಗಳ ಬಗ್ಗೆ ಮೂರು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದಾರೆ. ಅದರಲ್ಲಿ ಮಂಡ್ಯದಲ್ಲಿ ಕಣಕ್ಕಿಳಿದರೆ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆಂಬ ವರದಿಗಳಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದರೂ, ತಾವು ಕಣಕ್ಕಿಳಿದರೆ ಗೆಲುವು ಸುಲಭ ಎಂಬ ಮಾಹಿತಿ ಇದೆ. ಯಾರೇ ನಿಂತರೂ ಒಮ್ಮತದಿಂದ ಚುನಾವಣಾ ಹೋರಾಟ ನಡೆಸಿ ಅಭ್ಯರ್ಥಿಯನ್ನು ಗೆಲ್ಲಿಸಿ ಹಾಗೂ ಅವರು ಸ್ಥಳೀಯರೇ ಆಗಬಹುದು ಇಲ್ಲವೇ ಆಕಸ್ಮಿಕ ಅಭ್ಯರ್ಥಿಯೂ ಆಗಿರಬಹುದು ಎಂಬ ವಿಚಾರವನ್ನು ಮಾಜಿ ಸಿಎಂ ಸಭೆಯ ಮುಂದಿಟ್ಟಿದ್ದಾರೆ.

ಪ್ರಧಾನಿ ಮತ್ತು ತಮ್ಮ ನಡುವೆ ನಡೆದಿರುವ ಮಾತುಕತೆಯನ್ನು ಮುಖಂಡರ ಗಮನಕ್ಕೆ ತಂದಿರುವುದಲ್ಲದೆ, ಮೋದಿ ಅವರು ಹೇಳಿರುವ ಎಲ್ಲಾ ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ದೆಹಲಿ ರಾಜಕಾರಣಕ್ಕೆ ಬರಲೇಬೇಕೆಂದಾದರೆ, ನಾನು ಒಂದೆಡೆ ಕಣಕ್ಕಿಳಿಯಬೇಕಾಗುತ್ತದೆ. ಅಂತಹ ಸಂದರ್ಭ ಬಂದರೆ ನಿಮಗಾರಿಗೂ ಅನ್ಯಾಯ ಮಾಡುವುದಿಲ್ಲ, ನಿಮಗೆ ದಕ್ಕಬೇಕಾದ ಸ್ಥಾನಮಾನಗಳನ್ನು ಕೊಡಿಸುತ್ತೇನೆ, ಎಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದಿದ್ದಾರೆ.

ಮಂಡ್ಯದಲ್ಲಿ ಕುಮಾರಸ್ವಾಮಿ ಹೊರತುಪಡಿಸಿ ಜೆಡಿಎಸ್‌ನಿಂದ ಯಾರೇ ಸ್ಪರ್ಧಿಸಿದರೂ ಗೆಲುವು ಕಷ್ಟ ಎಂಬ ಸರ್ವೇ ವರದಿ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕೂಡ ಒಲವು ವ್ಯಕ್ತಪಡಿಸಿದ್ದಾರೆ. ಕೋಲಾರದಿಂದ ಮಲ್ಲೇಶ್ ಬಾಬು ಹಾಗೂ ಹಾಸನದಿಂದ ಪ್ರಜ್ವಲ್ ರೇವಣ್ಣ ಹೆಸರು ಅಂತಿಮಗೊಳಿಸಿದ್ದು, ಇಂದು ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹೆಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕಿಳಿಯಬೇಕೆಂದು ಭಾನುವಾರ ಮಂಡ್ಯದಿಂದ ಬಂದ ನೂರಾರು ಕಾರ್ಯಕರ್ತರು ಜೆ.ಪಿ.ನಗರದ ಹೆಚ್​ಡಿಕೆ ನಿವಾಸದ ಎದುರು ಘೋಷಣೆ ಕೂಗಿದರು. ಅಲ್ಲದೆ, ಬಿಜೆಪಿ ವರಿಷ್ಠರು ಕೂಡ ಸರ್ವೇ ಆಧರಿಸಿ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಲು ಒತ್ತಡ ಹೇರಿದ್ದರು. ಮೈತ್ರಿ ಪಕ್ಕಾ ಆದ ಆರಂಭದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದಿಂದ ನೀವೇ ಸ್ಪರ್ಧಿಸಿ ಎಂದು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:'13 ವರ್ಷಗಳ ಬಳಿಕ ಬಿಜೆಪಿ ಕಚೇರಿಗೆ ಬಂದಿದ್ದೇನೆ': 'ಗಣಿಧಣಿ' ಜನಾರ್ಧನ ರೆಡ್ಡಿ ಫರ್ ವಾಪ್ಸಿ - Janardhan Reddy Joins BJP

ABOUT THE AUTHOR

...view details