ಮಂಡ್ಯ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ, ಡಿಸಿಎಂ ಮತ್ತು ಸಚಿವ ಎನ್ ಚಲುವರಾಯಸ್ವಾಮಿ ಹಾಗೂ ಮಂಡ್ಯ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಸೇರಿ ಒಮ್ಮತದಿಂದ ನನ್ನನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡು ಹೋಗುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ಏನೇನು ಕೆಲಸ ಆಗಬೇಕು ಅನ್ನುವುದನ್ನ ಅರಿತು ಕೆಲಸ ಮಾಡುತ್ತೇನೆ. ಸಂಭಾವ್ಯ ಅಭ್ಯರ್ಥಿ ಅಂತ ಇತ್ತು, ಇವಾಗ ಅಧಿಕೃತ ಅಭ್ಯರ್ಥಿಯಾಗಿದ್ದೇನೆ. ನನ್ನ ಶ್ರಮ ಮೀರಿ ಪಕ್ಷಕ್ಕಾಗಿ ದುಡಿಯುತ್ತೇನೆ. ಶಿವರಾತ್ರಿ ಹಬ್ಬದ ದಿನ ಟಿಕೆಟ್ ಘೋಷಣೆಯಾಗಿದೆ. ದೇವರ ಹತ್ತಿರ ಕೂಡ ಪ್ರಾರ್ಥನೆ ಮಾಡಿದ್ದೆ. ಪಂಚಲಿಂಗೇಶ್ವರನ ಆಶೀರ್ವಾದಿಂದ ನನಗೆ ಟಿಕೆಟ್ ಸಿಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ಗೆಲುವಾಗಲಿ ಎಂದು ಹರಕೆ ಮಾಡಿಕೊಂಡಿದ್ದೇನೆ. ನಾನು ಹೊಸಬನಲ್ಲ, ಮೊದಲಿನಿಂದಲೂ ಕಾಂಗ್ರೆಸ್ನಲ್ಲಿ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ನಮ್ಮ ಅಣ್ಣ, ಅಳಿಯ, ಬೀಗರು ಕೂಡ ಎಂಎಲ್ಎ, ಎಂಪಿಗಳಾಗಿದ್ದಾರೆ. ನನಗೂ ಆಶೀರ್ವಾದ ಮಾಡಿ ಎಂದು ಮಂಡ್ಯ ಜನತೆಗೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಈಗಲೂ ಸ್ಟಾರ್ ಮುಂದೇಯೂ ಸ್ಟಾರ್ ಬರುತ್ತೆ:ನಮ್ಮ ಜನರು ಕೈ ಹಿಡಿಯುತ್ತಾರೆ ಅನ್ನೋ ವಿಶ್ವಾಸ ಇದೆ. ಸರ್ಕಾರದ ಗ್ಯಾರಂಟಿಗಳು, ನಾನು ಸ್ಥಳೀಯನಾಗಿರುವುದು ಮತ್ತು ರೈತ ಕುಟುಂಬದಿಂದ ಬಂದಿರುವುದರಿಂದ ಜನರು ಕೈ ಹಿಡಿದು ಆಶೀರ್ವಾದ ಮಾಡ್ತಾರೆ. ಕಾಂಗ್ರೆಸ್ ನವರು ಕೂಡ ಒಗ್ಗೂಡಿ ಕೆಲಸ ಮಾಡ್ತಾರೆ. ಎಲ್ಲರನ್ನೂ ಈಗಾಗಲೇ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇವೆ. ನಾಳೆಯಿಂದಲೇ ಪ್ರಚಾರ ಶುರು ಮಾಡುತ್ತೇನೆ. ಈಗಲೂ ಸ್ಟಾರ್ ಮುಂದೇಯೂ ಸ್ಟಾರ್ ಬರುತ್ತೆ. ದುಡ್ಡು ಇದ್ದವನು ಚುನಾವಣೆಯಲ್ಲಿ ಗೆಲ್ಲಲು ಆಗಲ್ಲ. ಜನರ ನಂಬಿಕೆ ಗಳಿಸಬೇಕು, ಅವರ ಸೇವೆ ಮಾಡಿದವನು ಮಾತ್ರ ಚುನಾವಣೆಯಲ್ಲಿ ಗೆಲ್ಲುತ್ತಾನೆ ಎಂದರು.