ಹಿಂದೂಪರ ಸಂಘಟನೆ ಮುಖಂಡರ ಪ್ರತಿಕ್ರಿಯೆ ಮಂಡ್ಯ:ಕೆರಗೋಡು ಹನುಮಧ್ವಜ ತೆರವು ವಿರೋಧಿಸಿ ಶುಕ್ರವಾರ ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಬಂದ್ಗೆ ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿವೆ. ಬಂದ್ಗೆ ಬಿಜೆಪಿ ಬಾಹ್ಯ ಬೆಂಬಲ ಸೂಚಿಸಿದರೆ, ಜೆಡಿಎಸ್ ಹಿಂದೆ ಸರಿದಿದೆ. ಜನವರಿ 28ರಂದು ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಅರ್ಜುನಸ್ತಂಭದ ಮೇಲಿದ್ದ ಹನುಮಧ್ವಜ ಕೆಳಗಿಳಿಸಿ, ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ಇದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಇದೀಗ ಭಜರಂಗ ದಳ, ವಿಶ್ವ ಹಿಂದೂಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಬಂದ್ಗೆ ನಿರ್ಧರಿಸಿವೆ.
ಕೆರಗೋಡು ಗ್ರಾಮದಲ್ಲಿ ಬೆಳಿಗ್ಗೆ ಪ್ರತಿಭಟಿಸಿ ಅಲ್ಲಿಂದ ಬೈಕ್ಗಳ ಮುಖಾಂತರ ಮಂಡ್ಯಕ್ಕೆ ಆಗಮಿಸಿ ಪ್ರತಿಭಟನೆ ಮುಂದುವರೆಸಲು ಸಂಘಟನೆಗಳು ತೀರ್ಮಾನಿಸಿವೆ. ಹಿಂದಾ ಕಾರ್ಯಕರ್ತರು ಮಂಡ್ಯದಲ್ಲಿಂದು ವರ್ತಕರಿಗೆ ಗುಲಾಬಿ ಹೂ ನೀಡಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು. ಬಿಜೆಪಿ ಬೈಕ್ ರ್ಯಾಲಿಯಲ್ಲಿ ಮಾತ್ರ ಪಾಲ್ಗೊಳ್ಳುತ್ತಿದೆ.
ಆರಂಭದಲ್ಲಿ ಬಿಜೆಪಿಗೆ ಸಾಥ್ ನೀಡಿ, ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕರು ಕೂಡಾ ಭಾಗವಹಿಸಿದ್ದರು. ಅಲ್ಲದೇ ಬೃಹತ್ ಪಾದಯಾತ್ರೆ ಕೂಡ ನಡೆಸಿದ್ದರು. ಆದರೆ ಇದೀಗ ಜೆಡಿಎಸ್ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಪ್ರತಿಭಟನೆ ವೇಳೆ ಕೇಸರಿ ಶಾಲು ಹಾಕಬಾರದಿತ್ತು, ಹಸಿರು ಶಾಲು ಹಾಕಬೇಕಿತ್ತು ಎಂದಿದ್ದರು. ಅದಾದ ಬಳಿಕ ಜೆಡಿಎಸ್ ನಾಯಕರು ಈ ವಿವಾದದಿಂದ ಹಿಂದೆ ಸರಿದಂತೆ ಕಾಣುತ್ತಿದೆ. ಮನೆಮನೆಗೆ ಹನುಮಧ್ವಜ ಕಟ್ಟುವ ಅಭಿಯಾನದಲ್ಲಿ ಜೆಡಿಎಸ್ ಕೂಡ ಪಾಲ್ಗೊಂಡಿರಲಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ''ಬಂದ್ಗೆ ಕರೆ ಕೊಟ್ಟವರು ಕಾನೂನು ಹಾಗೂ ಸಂವಿಧಾನದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಮಂಡ್ಯದ ಜನರು ನೆಮ್ಮದಿಯಿಂದಿರಲು ಬಿಡಿ. ಬಿಜೆಪಿಯವರು ಜೆಡಿಎಸ್ ಜೊತೆ ಸೇರಿ ಶಕ್ತಿ ಬಂದಿರಬಹುದು. ಕೆರಗೋಡಿನಲ್ಲಿ ಹಾರಿಸಿರುವ ರಾಷ್ಟ್ರಧ್ವಜ ಇಳಿಸಬೇಕಾ, ಬೇಡವಾ ಎಂದು ಸ್ಪಷ್ಟಪಡಿಸಲಿ. ನಾಳೆ ಲಿಖಿತ ರೂಪದಲ್ಲಿ ತಿಳಿಸಿದ ಬಳಿಕ ನಾನು ಮಾತನಾಡ್ತೇನೆ'' ಎಂದರು.
ಇದನ್ನೂ ಓದಿ:ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು: ಪರಿಸ್ಥಿತಿ ಉದ್ವಿಗ್ನ; ಬಿಜೆಪಿ ಜೆಡಿಎಸ್ ನಾಯಕರು ವಶಕ್ಕೆ