ಚಿಕ್ಕಬಳ್ಳಾಪುರ: ಮೂರು ವರ್ಷದ ಮಗುವನ್ನು ಕತ್ತು ಕೊಯ್ದು ಕೊಲೆಗೈದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುರುಗಮಲ್ಲ ಹೋಬಳಿ ನಿಮ್ಮಕಾಯಲಹಳ್ಳಿಯ ಗ್ರಾಮದ ಶಿರೀಷ ಹಾಗು ಮಂಜುನಾಥ ದಂಪತಿ ಪುತ್ರ ಗೌತಮ್ (3) ಹತ್ಯೆಯಾದ ಮಗು. ಇದೇ ಗ್ರಾಮದ ರಂಜಿತ್ (30) ಕೊಲೆ ಆರೋಪಿ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಅಣ್ಣ ಮಂಜುನಾಥ ಮನೆಗೆ ಬಂದ ರಂಜಿತ್ ಊಟ ಮಾಡಿ, ಸಂಜೆ ಗೌತಮ್‌ನನ್ನು ಮನೆಯ ಬಳಿ ಇರುವ ಪಾಳುಬಿದ್ದ ಹಳೆಯ ಮನೆಯೊಳಗೆ ಕರೆದೊಯ್ದು, ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮಂಜುನಾಥ ಅವರ ಚಿಕ್ಕಪ್ಪನ ಮಗನಾಗಿರುವ ರಂಜಿತ್, ಎಂಜಿನಿಯರಿಂಗ್ ಪದವೀಧರ. ಮೂರು ತಿಂಗಳಿಂದಲೂ ನಿಮ್ಮಕಾಯಲಹಳ್ಳಿಯಲ್ಲಿ ಮನೆ ನಿರ್ಮಿಸುತ್ತಿದ್ದು, ಮಂಜುನಾಥರ ಮನೆಯಲ್ಲಿ ವಾಸವಿದ್ದ. ಅಲ್ಲಿಯೇ ಊಟ, ತಿಂಡಿ ಮಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆರೋಪಿ ಯಾವ ಕಾರಣಕ್ಕೆ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿಲ್ಲ.