ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತದ ಬಳಿಕ ಅವಮಾನ, ಬೆದರಿಕೆ; ದ್ವಿಚಕ್ರ ವಾಹನ ಸವಾರ ಆತ್ಮಹತ್ಯೆ - Suicide - SUICIDE

ರಸ್ತೆ ಅಪಘಾತದ ನಂತರ ಉಂಟಾದ ಅವಮಾನದಿಂದ ನೊಂದ ದ್ವಿಚಕ್ರ ವಾಹನ ಸವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಪಘಾತದ ಬಳಿಕ ಅವಮಾನಕ್ಕೊಳಗಾದ ದ್ವಿಚಕ್ರ ವಾಹನ ಸವಾರ ಆತ್ಮಹತ್ಯೆ
ಶ್ರೀಶೈಲ್ ಹಾಗೂ ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ (ETV Bharat)

By ETV Bharat Karnataka Team

Published : Jul 17, 2024, 7:16 AM IST

ಬೆಂಗಳೂರು:ಅಪಘಾತದ ಬಳಿಕ ಉಂಟಾದ ಅವಮಾನ ಹಾಗೂ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜುಲೈ 1ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಂದಲಹಳ್ಳಿ ನಿವಾಸಿ ಶ್ರೀಶೈಲ್ ಎಂ.ಧನಕ್ (28) ಸಾವನ್ನಪ್ಪಿದ್ದಾರೆ.

ಘಟನೆಯ ಪೂರ್ಣ ವಿವರ:ಜೂನ್​ 30ರಂದು ಚಿನ್ನಪ್ಪನಹಳ್ಳಿಯಲ್ಲಿ ಸ್ನೆಹಿತರನ್ನು ಭೇಟಿಯಾಗಿದ್ದ ಶ್ರೀಶೈಲ್​, ಪಾರ್ಟಿ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ಮಾರ್ಗಮಧ್ಯೆ ದೊಡ್ಡನೆಕ್ಕುಂದಿ ಸಮೀಪ ಸ್ಕೂಟರ್ ಹಾಗು ಕಾರಿನ ನಡುವೆ ಅಪಘಾತವಾಗಿದೆ. ಕಾರು ಚಾಲಕ ಶ್ರೇಯಸ್ ಮತ್ತು ಆತನ ಸ್ನೇಹಿತರು, ಶ್ರೀಶೈಲ್​ನ ವಿಡಿಯೋ ಚಿತ್ರೀಕರಿಸಿ, ಮದ್ಯ ಸೇವಿಸಿದ್ದಿಯಾ ಎಂದು ಬೆದರಿಸಿದ್ದರು. ಕಾರಿನ ರಿಪೇರಿ ಖರ್ಚು ನೀಡದ ಹೊರತು ಸ್ಕೂಟರ್ ಮರಳಿ ಕೊಡುವುದಿಲ್ಲ ಎಂದು ಸ್ಕೂಟರ್​​ ವಶಕ್ಕೆ ಪಡೆದುಕೊಂಡಿದ್ದರು. ಆರು ತಿಂಗಳ‌‌ ಹಿಂದೆ ಖರೀದಿಸಿದ್ದ ಸ್ಕೂಟರ್ ಹಾಗೂ ಶ್ರೇಯಸ್ ಕಡೆಯವರಿಂದಾದ ಅವಮಾನದಿಂದ ನೊಂದ ಶ್ರೀಶೈಲ್, ಮಾರನೇ ದಿನ ಕೆಲಸಕ್ಕೆ ಹೋಗದೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಸಂಬಂಧಿಕರೊಬ್ಬರ ಮನೆಯ ಸಮಾರಂಭವೊಂದಕ್ಕೆ ಹೋಗಿದ್ದ ಅವರು,​ ಪೋಷಕರು ಕರೆ ಸ್ವೀಕರಿಸಿರಲಿಲ್ಲ. ಬಳಿಕ ಬೆಂಗಳೂರಿನಲ್ಲಿದ್ದ ಆತನ ಬಾವ ಮನೆ ಬಳಿ‌ ಹೋಗಿ ಗಮನಿಸಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.

ಮಗನ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣ ತಿಳಿಯದ ಪೋಷಕರಿಗೆ ಜುಲೈ 12ರಂದು ಕರೆ ಮಾಡಿದ್ದ ಮಹಾದೇವಪುರ ಸಂಚಾರಿ ಠಾಣೆ ಪೊಲೀಸರು, ಆತನನ್ನು ಠಾಣೆಗೆ ಕರೆತರುವಂತೆ ಸೂಚಿಸಿದ್ದರು. ಅದರಂತೆ ಏನಾಗಿರಬಹುದೆಂದು ತಿಳಿದುಕೊಳ್ಳಲು ಠಾಣೆಗೆ ಶ್ರೀಶೈಲ್ ಪೋಷಕರು ತೆರಳಿದ್ದು, ಸ್ಕೂಟರ್ ಅಪಘಾತವಾಗಿರುವುದು ಮತ್ತು ಕಾರು ಚಾಲಕ ಶ್ರೇಯಸ್ ದೂರು ನೀಡಿರುವುದು ಗೊತ್ತಾಗಿದೆ.

ಘಟನಾ ಸ್ಥಳಕ್ಕೆ ತೆರಳಿದ್ದ ಶ್ರೀಶೈಲ್​ನ ತಂದೆ ಹಾಗೂ ಸಹೋದರ ಪ್ರತ್ಯಕ್ಷದರ್ಶಿಗಳನ್ನು ವಿಚಾರಿಸಿದಾಗ, ಅಪಘಾತದ ದಿನದಂದು ನಡೆದ ವೃತ್ತಾಂತ, 12 ದಿನಗಳ ಕಾಲ ಶ್ರೀಶೈಲ್‌ನ ಸ್ಕೂಟರ್‌ ವಶದಲ್ಲಿಟ್ಟುಕೊಂಡಿದ್ದ ಶ್ರೇಯಸ್, ನಂತರ ಪೊಲೀಸರಿಗೆ ದೂರು ನೀಡಿರುವುದು ತಿಳಿದು ಬಂದಿದೆ. ಶ್ರೀಶೈಲ್‌ನ​ ತಂದೆ ನೀಡಿರುವ ದೂರಿನ ಮೇರೆಗೆ ಶ್ರೇಯಸ್ ಮತ್ತು ಆತನ ಸ್ನೇಹಿತರ ವಿರುದ್ಧ ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಬಳಿಕ ದೂರು ನೀಡದೆ ಬಗೆಹರಿಸಿಕೊಳ್ಳಲು ಯತ್ನಿಸಿದ್ದ ಶ್ರೇಯಸ್, ಶ್ರೀಶೈಲ್​ನ ಸ್ಕೂಟರ್ ವಶಕ್ಕೆ ಪಡೆದು 12 ದಿನಗಳ ಕಾಲ ಇಟ್ಟುಕೊಂಡಿದ್ದ. ಆತನ ಫೋನ್ ನಂಬರ್ ಸ್ವಿಚ್ ಆಫ್ ಬರುತ್ತಿದ್ದರಿಂದ ಠಾಣೆಗೆ ದೂರು ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗೆಳೆಯನ ಹತ್ಯೆ, ಪತ್ನಿ ಕೊಲೆಗೆ ಯತ್ನ: 8 ಕಿಮೀ ದೂರ ಸಾಗಿ ವಾಸನೆ ಮೂಲಕ ಆರೋಪಿ ಹಿಡಿದ ತುಂಗಾ! - DAVANAGERE MURDER CASE

ABOUT THE AUTHOR

...view details