ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ. ನಂಜುಂಡೇಗೌಡ ಅಲಿಯಾಸ್ ಲೋಕೇಶ್ (44) ಕೊಲೆಯಾದ ವ್ಯಕ್ತಿ. ತಾಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.
ನಂಜುಂಡೇಗೌಡ ರೈತರಿಂದ ಹಾಲು ಸಂಗ್ರಹ ಮಾಡಿಕೊಂಡು ಡೈರಿಗೆ ಹಾಲು ಹಾಕಲು ಮಹೀಂದ್ರ ಜೀತೋ ವಾಹನದಲ್ಲಿ ತೆರಳುತ್ತಿದ್ದರು. ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಂಜುಂಡೇಗೌಡ ಬರುತ್ತಿರುವಾಗ ಮೊಳೆ ಇಟ್ಟು ಅವರ ವಾಹನವನ್ನು ಪಂಚರ್ ಮಾಡಿದ್ದಾರೆ. ಪಂಚರ್ ಆದ ವಾಹನದ ಚಕ್ರವನ್ನು ಪರೀಕ್ಷಿಸಲು ವಾಹನದಿಂದ ಇಳಿದ ಕೂಡಲೇ ನಂಜುಂಡೇಗೌಡನನ್ನು ಸುತ್ತುವರೆದು ಲಾಂಗು ಮಚ್ಚು ಮತ್ತು ಇತರೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.