ಬೆಂಗಳೂರು :ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿಗೆ ಬರುವ ಸಾಧ್ಯತೆ ಇದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಕುತೂಹಲದ ಹೇಳಿಕೆ ನೀಡಿದ ಪ್ರಸಂಗ ನಡೆಯಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ್ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಗೂ ಅನುದಾನ ಕೊಟ್ಟಿಲ್ಲ ಎಂದು ಹೇಳಿದಾಗ, ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಧ್ಯೆ ಪ್ರವೇಶಿಸಿ ಮಾತನಾಡಿ, 40 ಪರ್ಸೆಂಟ್ ಕಮೀಷನ್ ಬಗ್ಗೆ ಈ ಸರ್ಕಾರ ತನಿಖೆಯನ್ನೇ ಮಾಡಲಿಲ್ಲ. ಕಾಂಗ್ರೆಸ್‌ನ ಹಲವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳು ಇವೆ. ಮಧ್ಯಪ್ರದೇಶದ ಕಮಲನಾಥ್ ಬಿಜೆಪಿ ಸೇರುತ್ತಾರೆ. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರುತ್ತಾರೆ ಎಂಬ ಮಾತುಗಳಿವೆ ಎಂದು ಹೇಳಿದ್ದು, ಸಚಿವ ಪ್ರಿಯಾಂಕ್ ಖರ್ಗೆಯವರ ಸಿಟ್ಟಿಗೆ ಕಾರಣವಾಯಿತು. ಆಗ ಯತ್ನಾಳ್ ಜತೆ ಮಾತಿನ ಚಕಮಕಿ ನಡೆಸಿದರು. ನಮ್ಮ ಹೆಣ ಕೂಡಾ ಬಿಜೆಪಿ ಕಡೆ ಹೋಗಲು ಸಾಧ್ಯವೇ ಇಲ್ಲ. ನಮ್ಮ ರಕ್ತದಲ್ಲಿ ಅದು ಇಲ್ಲವೇ ಇಲ್ಲ ಎಂದು ಸಿಟ್ಟಿನಿಂದ ಹೇಳಿದರು.
ಮಾತು ಮುಂದುವರೆಸಿದ ಪ್ರಿಯಾಂಕ್ ಖರ್ಗೆ, ನಿಮ್ಮ ರಕ್ತದಲ್ಲಿ ಸಂವಿಧಾನ ಇಲ್ಲ, ನಮ್ಮ ರಕ್ತದಲ್ಲಿ ಆರ್‌ಎಸ್‌ಎಸ್ ಇಲ್ಲ ಎಂದು ಯತ್ನಾಳ್ ಅವರಿಗೆ ನೇರವಾಗಿ ತಿರುಗೇಟು ಕೊಟ್ಟರು. ಬಸನಗೌಡ ಪಾಟೀಲ್ ಯತ್ನಾಳ್, ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡುತ್ತಿರುವುದು ನಾವೇ ಎಂದು ಸಮರ್ಥಿಸಿಕೊಂಡರು.
ಪ್ರಿಯಾಂಕ್ ಖರ್ಗೆ ಮಾತನಾಡಿ, ನೀವು ಹೇಗೆ ಸಂವಿಧಾನ ಸರಿಯಾಗಿ ಜಾರಿ ಮಾಡಿದ್ದೀರಾ ಸರ್. ಒಂದು ಧರ್ಮಕ್ಕೆ ಮಾತ್ರ ಆದ್ಯತೆ ನೀಡುವುದು ಸಂವಿಧಾನ ಬದ್ಧವೇ? ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಸ್ಪೀಕರ್ ಯು. ಟಿ ಖಾದರ್ ಪದೇ ಪದೇ ಈ ರೀತಿ ಮಧ್ಯದಲ್ಲಿ ಎದ್ದುನಿಂತು ಚರ್ಚೆ ಮಾಡುವುದು ಬೇಡ. ಅರವಿಂದ ಬೆಲ್ಲದ್ ಚರ್ಚೆ ಮುಂದುವರೆಸಲಿ ಎಂದು ಹೇಳಿ ಈ ಕುರಿತ ಹೆಚ್ಚಿನ ಚರ್ಚೆಗೆ ಅವಕಾಶ ಕೊಡದೆ ಯತ್ನಾಳ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಮಾತುಗಳಿಗೆ ತಡೆ ಹಾಕಿದರು.