ಕರ್ನಾಟಕ

karnataka

ETV Bharat / state

ಮಲೆನಾಡ ಹೆಬ್ಬಾಗಿಲಿಗೆ ತುಳುನಾಡ ಜನಪ್ರಿಯ ಕ್ರೀಡೆ ಕಂಬಳ: ಭರದಿಂದ ಸಾಗಿದ ಸಿದ್ಧತೆ - MALENADU KAMBALA

ಇದೇ ಮೊದಲ ಬಾರಿಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕಂಬಳ ನಡೆಸಲಾಗುತ್ತಿದೆ. ಈ ಕುರಿತು ಈಟಿವಿ ಭಾರತ್ ವರದಿಗಾರ ಕಿರಣ್ ಕುಮಾರ್ ಎಸ್.ಇ ವಿಶೇಷ ವರದಿ.

kambala
ಕಂಬಳ (ETV Bharat)

By ETV Bharat Karnataka Team

Published : Feb 7, 2025, 9:26 PM IST

ಶಿವಮೊಗ್ಗ:ತುಳುನಾಡಿನ ಜಾನಪದ ಕ್ರೀಡೆಯನ್ನು ವಿಸ್ತರಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕಂಬಳ ನಡೆಸಲಾಗುತ್ತಿದೆ. ಈ ಕ್ರೀಡೆಯನ್ನು ಜಿಲ್ಲೆಯ ಭದ್ರಾವತಿ ನಗರಗಳ ಮಧ್ಯದ ಮಾಚೇನಹಳ್ಳಿಯಲ್ಲಿ ಆಯೋಜಿಸಲಾಗಿದೆ. ಸುಮಾರು 16 ಎಕರೆ ಪ್ರದೇಶದಲ್ಲಿ ಕಂಬಳ ನಡೆಸಲಾಗುತ್ತಿದೆ.

ಏಪ್ರಿಲ್ 19 ಮತ್ತು 20ರಂದು ಜೋಡು ಕಂಬಳ ನಡೆಯುತ್ತದೆ. ಇದಕ್ಕಾಗಿ ತುಳುನಾಡಿನಿಂದ ಸುಮಾರು 100 ಜೊತೆ ಜೋಡಿ ಕೋಣಗಳು ಬರಲಿವೆ. ಕೇವಲ ಚಲನಚಿತ್ರದಲ್ಲಿ ನೋಡುತ್ತಿದ್ದ ಕಂಬಳ ಈಗ ಮಲೆನಾಡಿಗರ ಕಣ್ಣಮುಂದೆಯೇ ನಡೆಯಲಿದೆ. ಕಂಬಳ ಸಮಿತಿಯವರು ಈ ಹಿಂದೆ ಬೆಂಗಳೂರಿನಲ್ಲಿ ಈ ಕ್ರೀಡೆಯನ್ನು ಆಯೋಜಿಸಿದ್ದರು. ಅಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಕಂಬಳವನ್ನು ಶಿವಮೊಗ್ಗದಲ್ಲಿ ನಡೆಸಲಾಗುತ್ತಿದೆ.

ಮಲೆನಾಡ ಹೆಬ್ಬಾಗಿಲಿಗೆ ತುಳುನಾಡ ಜನಪ್ರಿಯ ಕ್ರೀಡೆ ಕಂಬಳ- ಹೇಳಿಕೆಗಳು (ETV Bharat)

ಜೋಡು ಕಂಬಳ ಎಂದರೇನು?:ಜೋಡು ಅಂದ್ರೆ ಎರಡು ಎಂದರ್ಥ. ಕೋಣಗಳು ಓಡಲು ಎರಡು ಟ್ರ್ಯಾಕ್​ ಮಾಡಲಾಗುತ್ತದೆ. ಇಲ್ಲಿ ಕೋಣಗಳು ಪ್ರತ್ಯೇಕವಾಗಿ ಓಡುತ್ತವೆ. ಇಲ್ಲಿ ಅತ್ಯಂತ ವೇಗವಾಗಿ ಓಡುವ ಕೋಣಗಳನ್ನು ವಿಜಯಶಾಲಿ ಎಂದು ಘೋಷಿಸಲಾಗುತ್ತದೆ. ಕೋಣಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓಡಿಸುವವ ಹಾಗೂ ಕೋಣ ಬಿಡುವವನಾಗಿರುತ್ತಾನೆ.

ಇಲ್ಲಿ ಕೋಣ ಓಡಿಸುವಾತ ಕೋಣದ ಜೊತೆ ಓಡಬೇಕು. ಓಡಿಸುವಾತನ ಅಣತಿಯಂತೆ ಕೋಣಗಳು ಓಡುತ್ತವೆ. ಮಲೆನಾಡಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಹೋರಿಗಳನ್ನು ಹಿಡಿಯುವ, ಅದರ ಮೈಮೇಲೆ ಇರುವ ಕೊಬ್ಬರಿ ಹರಿದು ಕೊಂಡು ಬಂದವರಿಗೆ ಬಹುಮಾನ ಇರುತ್ತದೆ. ಕಂಬಳದಲ್ಲಿ ವೇಗವಾಗಿ ಓಡುವ ಕೋಣಕ್ಕೆ ಬಹುಮಾನ ಇರುತ್ತದೆ.

150 ಮೀ ಉದ್ದದ ಏಳೂವರೆ ಮೀಟರ್ ಅಗಲದ ಟ್ರ್ಯಾಕ್: ಶಿವಮೊಗ್ಗದಲ್ಲಿ ನಡೆಯುವ ಜೋಡು ಕಂಬಳದ ಕ್ರೀಡೆಯಲ್ಲಿ ಎರಡು ಟ್ರ್ಯಾಕ್ ಮಾಡಲಾಗುತ್ತದೆ. ಸುಮಾರು‌ 150 ಮೀಟರ್ ಉದ್ದದ ಟ್ರ್ಯಾಕ್​ ಇರುತ್ತದೆ. ಇಲ್ಲಿ ಏಳೂವರೆ ಮೀಟರ್ ಅಗಲದ ಎರಡು ಟ್ರ್ಯಾಕ್​ ಇರುತ್ತವೆ.

ಈ ಟ್ರ್ಯಾಕ್​ನಲ್ಲಿ ಕೋಣಗಳು ಓಡಬೇಕಾಗುತ್ತದೆ. ಈ ಟ್ರ್ಯಾಕ್​ ನಿರ್ಮಾಣಕ್ಕೆ ಸುಮಾರು 1 ತಿಂಗಳು ಬೇಕಾಗುತ್ತದೆ. ಇದಕ್ಕಾಗಿ ತುಳುನಾಡಿನಿಂದಲೇ ಪರಿಣಿತರು ಬರುತ್ತಾರೆ. ಅವರು ಟ್ರ್ಯಾಕ್ ನಿರ್ಮಾಣ ಮಾಡಲು ಮೊದಲು ಮಣ್ಣಿನ ಸ್ವಲ್ಪ‌ ಪದರವನ್ನು ತೆಗೆಯುತ್ತಾರೆ. ನಂತರ ಅದಕ್ಕೆ ನಿರ್ದಿಷ್ಟ ಪ್ರಮಾಣದ ಮರಳನ್ನು ಹಾಕುತ್ತಾರೆ. ಟ್ರ್ಯಾಕ್​ನಲ್ಲಿ ಸುಮಾರು‌ 5 ಇಂಚು‌ ನೀರನ್ನು ನಿಲ್ಲಿಸಲಾಗುತ್ತದೆ. ಇಲ್ಲಿ ಕೋಣಗಳನ್ನು ಓಡಿಸಲಾಗುತ್ತದೆ.

ಏಪ್ರಿಲ್ 19 ಮತ್ತು 20ರಂದು ನಡೆಯುವ ಕಂಬಳಕ್ಕೆ ಸುಮಾರು 100 ಜೋಡಿ‌ ಕೋಣಗಳು ಬರುತ್ತಿವೆ. ಅವುಗಳಿಗಾಗಿ ಪ್ರತ್ಯೇಕ ಜಾಗವನ್ನು ನಿಗದಿಪಡಿಸಲಾಗಿದೆ. ನೂರು ಜೋಡಿ ಕೋಣಗಳಿಗಾಗಿ ಶಾಮಿಯಾನ ಹಾಕಿ ಅವುಗಳಿಗೆ ತಂಗಲು ಅವಕಾಶ ಮಾಡಿಕೊಡಲಾಗುತ್ತದೆ. ಕೋಣಗಳ ಮಾಲೀಕರು, ಓಡಿಸುವವರು, ಬಿಡುವವರು ಸೇರಿ ಸಾವಿರಾರು ಜನ ಆಗಮಿಸಲಿದ್ದಾರೆ.

ಕೋಣಗಳನ್ನು ಮಕ್ಕಳಂತೆ ಸಾಕುವ ಮಾಲೀಕರು: ಸಾಮಾನ್ಯವಾಗಿ ಕೋಣವನ್ನು ಉಳುಮೆಗಾಗಿ ಮಾತ್ರ ಬಳಸಲಾಗುತ್ತದೆ. ಆದರೆ, ತುಳುನಾಡಿನ ಜನ ಕಂಬಳಕ್ಕಾಗಿ ಬಳಸುವ ಈ ಕೋಣಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕುತ್ತಾರೆ. ಮಾಲೀಕರು ವಿದೇಶದಲ್ಲಿದ್ದರೂ ಕೂಡ ಕೋಣಗಳಿಗೆ ಸ್ವಲ್ಪ ಹುಷಾರಿಲ್ಲ ಎಂದು ತಿಳಿದರೆ ಸಾಕು ತಕ್ಷಣವೇ ತಮ್ಮ‌ ಮನೆಗೆ ಬರುತ್ತಾರೆ. ಅಷ್ಟೊಂದು ಪ್ರೀತಿಯಿಂದ ಕೋಣವನ್ನು ಸಾಕುತ್ತಾರೆ. ಕೋಣಗಳೂ ಸಹ ಮಾಲೀಕರನ್ನು ಅಪ್ಪಿಕೊಂಡಿರುತ್ತವೆ.

ಕೋಣಗಳ ಜೊತೆಗೆ ಅವುಗಳನ್ನು ಓಡಿಸುವವರು ಹಾಗೂ ಬಿಡುವವರು ಸಹ ಇರುತ್ತಾರೆ. ಇದರಿಂದ ಕೋಣ ಸಾಕುವುದು ದುಬಾರಿ. ಕರಾವಳಿ ಭಾಗಕ್ಕೆ ಹೊಂದಿಕೊಂಡಿರುವ ಕೋಣಗಳನ್ನು ಬೇರೆ ಕಡೆ ತೆಗೆದುಕೊಂಡು ಹೋಗುವುದು ಸುಲಭವಲ್ಲ.

ಕಂಬಳದಿಂದ ಸ್ವಲ್ಪ ದೂರದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ಅಂದು ಕನ್ನಡ ಖ್ಯಾತ ನಟರು ಆಗಮಿಸಲಿದ್ದಾರೆ. ಸಂಗೀತ‌ ಸಂಜೆ ಕಾರ್ಯಕ್ರಮಕ್ಕೆ ಗುರುಕಿರಣ್ ಆಗಮಿಸುತ್ತಿದ್ದಾರೆ. ಕಂಬಳಕ್ಕೆ ಆಗಮಿಸುವವರಿಗಾಗಿ 250 ವಿವಿಧ ಸ್ಟಾಲ್​ಗಳನ್ನು ಹಾಕಲಾಗುತ್ತದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಂಬಳಕ್ಕೆ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಿಕೊಳ್ಳಲಾಗಿದೆ.

ಕಂಬಳ ಆಯೋಜಕ ಲೋಕೇಶ್ ಶೆಟ್ಟಿ ಮಾತನಾಡಿ, ''ಕಂಬಳ ಅಂದ್ರೆ ತುಳುನಾಡಿನ ಜನಪದ, ವೀರ ಹಾಗೂ ಶ್ರೀಮಂತ ಕ್ರೀಡೆಯಾಗಿದೆ. ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಕ್ರೀಡೆಯನ್ನು ಕಳೆದ ಬಾರಿ ನಾವು ಬೆಂಗಳೂರಿನಲ್ಲಿ ನಡೆಸಿದ್ದೆವು. ಕಂಬಳಕ್ಕೆ ಪ್ರೇಕ್ಷಕ ವರ್ಗವನ್ನು ಹೆಚ್ಚಿಸಬೇಕು ಹಾಗೂ ತುಳುನಾಡಿನ‌ ಕಲೆಯನ್ನು ವಿಸ್ತರಿಸಬೇಕು, ರಾಜ್ಯವಲ್ಲದೇ, ದೇಶದಲ್ಲೂ ಸಹ ಇದನ್ನು ಬೆಳೆಸುವ ನಿಟ್ಟಿನಲ್ಲಿ ಈ ಕ್ರೀಡೆಯನ್ನು ತುಳುನಾಡಿನಿಂದ ಹೊರಗೆ ನಡೆಸಲಾಗುತ್ತಿದೆ'' ಎಂದರು.

''ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕಂಬಳ ನಡೆಸಲು ನಮಗೆ ನೆರವಾಗಿರುವುದು ಕೆ. ಈ ಕಾಂತೇಶ್​ ಅವರು. ಅವರು ನಮಗೆ ಜಾಗ ತೋರಿಸಿದಾಗ ಈ ಜಾಗ ಕಂಬಳ‌ ನಡೆಸಲು ಸೂಕ್ತ ಎನ್ನಿಸಿತು. ಇದರಿಂದಾಗಿ ಶಿವಮೊಗ್ಗದಲ್ಲಿ ಕಂಬಳ ನಡೆಸಲು ನಾವು ಸಿದ್ಧತೆ ನಡೆಸಿದ್ದೇವೆ. ಇಲ್ಲಿ ನಾವು ಕಂಬಳದ ಅಭಿಮಾನವನ್ನು ಹೆಚ್ಚಿಸಬೇಕೆಂದು ಕ್ರೀಡೆ ನಡೆಸುತ್ತಿದ್ದೇವೆ. ಕೋಣ ನಾವು ಸಾಕಿದಂತೆ ಇರುತ್ತದೆ. ಅದು ನಮ್ಮ ಮನೆಯಲ್ಲಿ ಸಣ್ಣ ಮಕ್ಕಳ ರೀತಿ ಇರುತ್ತದೆ.‌ ಕಂಬಳವನ್ನು ಬೆಳೆಸಬೇಕೆಂಬುದು ನಮ್ಮ ಆಶಯವಾಗಿದೆ. ಶಿವಮೊಗ್ಗ ಕಂಬಳಕ್ಕೆ ಸುಮಾರು‌ 100 ಜೋಡಿ‌ ಕೋಣ ತರುವ ಉದ್ದೇಶವಿದೆ.‌ ಕಂಬಳ‌ ನೋಡಲು ಸುಮಾರು 10 ಲಕ್ಷ ಜನ‌ ಸೇರಿಸುವ ಉದ್ದೇಶವಿದೆ'' ಎಂದು ಹೇಳಿದರು.

ಈ ಕುರಿತು ಕಂಬಳ ಆಯೋಜಕ ಕೆ.ಈ.ಕಾಂತೇಶ್ ಮಾತನಾಡಿ, ''ಶಿವಮೊಗ್ಗದಲ್ಲಿ ಮಲೆನಾಡು ತುಂಗಭದ್ರಾ ಜೋಡು ಕೆರೆ ಕಂಬಳ ಹೆಸರಿನಲ್ಲಿ ಏಪ್ರಿಲ್‌ 19-20 ರಂದು ಕಂಬಳ ಕ್ರೀಡೆ ಆಯೋಜನೆ ನಡೆಸಲಾಗುತ್ತಿದೆ. ತುಳುನಾಡಿನ ಕಂಬಳವನ್ನು ಮಲೆನಾಡಿನಲ್ಲೂ ನಡೆಸಬಹುದು ಎಂದು ತೀರ್ಮಾನಿಸಲಾಗಿದೆ. ಲೋಕೇಶ್​ ಅವರ ಅಧ್ಯಕ್ಷತೆಯಲ್ಲಿ ಕಂಬಳ ನಡೆಸಲಾಗುತ್ತಿದೆ. ಕಂಬಳದಲ್ಲಿ ಸುಮಾರು 100 ಜೋಡಿ ಕೋಣಗಳು ಬರಲಿವೆ. ಈ ಕಂಬಳ ನೋಡಲು ಶಿವಮೊಗ್ಗ ಅಲ್ಲದೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗದಿಂದ ಸುಮಾರು 8-10 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ.‌ ಇಲ್ಲಿ 250 ಸ್ಟಾಲ್​ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಶಿವಮೊಗ್ಗದಲ್ಲಿ ಮೊದಲ ಬಾರಿ ಕಂಬಳ ಆಯೋಜನೆ ಮಾಡಿರುವುದನ್ನು ನೋಡಲು ಜನ ಕಾತುರತೆಯಿಂದ ಕಾಯುತ್ತಿದ್ದಾರೆ. ಕಂಬಳದ ದಿನ ಕನ್ನಡ ಖ್ಯಾತ ನಟರು ಭಾಗಿಯಾಗಲಿದ್ದಾರೆ'' ಎಂದು ಹೇಳಿದರು.

ಇದನ್ನೂ ಓದಿ:ಜನಪ್ರಿಯ ಗ್ರಾಮೀಣ ಕ್ರೀಡೆ ಕಂಬಳಕ್ಕೆ ಸರ್ಕಾರದಿಂದ ನೆರವು: ಸಿಎಂ ಸಿದ್ದರಾಮಯ್ಯ - CM SIDDARAMAIAH INAUGURATES KAMBALA

ABOUT THE AUTHOR

...view details