ಕರ್ನಾಟಕ

karnataka

ETV Bharat / state

ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರೆಗೆ ಅಗತ್ಯ ಸಿದ್ದತೆ ಕೈಗೊಳ್ಳಿ: ಸಚಿವ ಕೆ ವೆಂಕಟೇಶ್ ಸೂಚನೆ - ಮಹಾಶಿವರಾತ್ರಿ ಜಾತ್ರೆ

ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರೆಗೆ ಅಗತ್ಯ ಸಿದ್ದತೆ ಕೈಗೊಳ್ಳಿ ಎಂದು ಸಚಿವ ಕೆ.ವೆಂಕಟೇಶ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

Mahashivratri fair  Chamarajanagar  Minister K Venkatesh  ಮಹಾಶಿವರಾತ್ರಿ ಜಾತ್ರೆ  ಸಚಿವ ಕೆ ವೆಂಕಟೇಶ್
ಸಚಿವ ಕೆ ವೆಂಕಟೇಶ್ ಸೂಚನೆ

By ETV Bharat Karnataka Team

Published : Feb 10, 2024, 11:15 AM IST

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂಬರಲಿರುವ ಮಹಾ ಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಇರುವ ಎಲ್ಲ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಲೋಕೋಪಯೋಗಿ ಇಲಾಖೆಯ ತಪೋಭವನ ಸಭಾಂಗಣದಲ್ಲಿ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದರು.

ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಭಕ್ತಾಧಿಗಳಿಗೆ ನೆರಳಿನ ವ್ಯವಸ್ಥೆ ಮಾಡಬೇಕು. ಸರತಿ ಸಾಲಿನಲ್ಲಿ ದರ್ಶನ ಮಾಡುವವರಿಗೆ ಸಹ ನೆರಳಿಗೆ ಅಗತ್ಯ ವ್ಯವಸ್ಥೆ ಇರಬೇಕು. ತುರ್ತು ಸಂದರ್ಭಗಳಲ್ಲಿ ಅವಶ್ಯವಿರುವ ಕಡೆಗಳಲ್ಲಿ ನೆರಳು ಮತ್ತು ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಖಾಯಂ ಶೌಚಾಲಯಗಳ ಜೊತೆಗೆ ತಾತ್ಕಾಲಿಕ ಶೌಚಾಲಯಗಳನ್ನು ಸಹ ಅಳವಡಿಸಬೇಕು ಎಂದು ಸಚಿವರು ತಿಳಿಸಿದರು.

ಜಾತ್ರೆ ಸಂದರ್ಭದಲ್ಲಿ ಹೆಚ್ಚು ಭಕ್ತರು ಬರುವುದರಿಂದ ಸ್ವಚ್ಛತಾ ನಿರ್ವಹಣೆಗೆ ಹೆಚ್ಚು ಪೌರಕಾರ್ಮಿಕರನ್ನು ನಿಯೋಜಿಸಿಕೊಳ್ಳಬೇಕು. ಪಾಳೆ ಮೇಲೆ ಸ್ವಚ್ಛತಾ ಕಾರ್ಯ ನಿರ್ವಹಣೆಯಾಗಬೇಕು. ಕ್ಷೇತ್ರದಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಾಳುಬೆಟ್ಟದಿಂದಲೇ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ಭಕ್ತಾಧಿಗಳಿಗೆ ಮನವರಿಕೆ ಮಾಡಿಕೊಡಬೇಕು. ಪ್ಲಾಸ್ಟಿಕ್ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಾತ್ರೆ ನಡೆಯುವ ದಿನಗಳಲ್ಲಿ ವಿಶೇಷ ದಾಸೋಹ ಇರಬೇಕು. ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ಕೆ.ಎಸ್.ಆರ್.ಟಿ.ಸಿ ಬಸ್​​ಗಳು, ಇನ್ನಿತರ ಲಘು ವಾಹನಗಳಿಗೂ ನಿಗದಿತ ಸ್ಥಳ ಇರಬೇಕು. ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚು ಜನರು ಆಗಮಿಸುವ ಹಿನ್ನೆಲೆ ಕೆ.ಎಸ್.ಆರ್.ಟಿ.ಸಿಯಿಂದ ಹೆಚ್ಚು ಸಂಖ್ಯೆಯಲ್ಲಿ ಬಸ್‍ಗಳ ವ್ಯವಸ್ಥೆ ಮಾಡಬೇಕು. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಭಕ್ತಾಧಿಗಳಿಗೆ ಬಸ್​​ನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಭದ್ರತೆಗಾಗಿ ಪೊಲೀಸ್ ನಿಯೋಜನೆ, ವಿದ್ಯುತ್ ದೀಪಾಲಂಕಾರ, ನಿರಂತರ ವಿದ್ಯುತ್ ಪೂರೈಕೆಯಂತಹ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಇತರ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ತಿಳಿಸಿದರು. ಸಾಲೂರು ಶ್ರೀಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎಂ.ಆರ್. ಮಂಜುನಾಥ್ ಇದ್ದರು.

ಓದಿ:ಗುಂಡಿಕ್ಕಿ ಕೊಲ್ಲಬೇಕು ಹೇಳಿಕೆ: ಕೆಎಸ್ ಈಶ್ವರಪ್ಪ ವಿರುದ್ಧ FIR ದಾಖಲು

ABOUT THE AUTHOR

...view details