ಬೆಳ್ತಂಗಡಿ:ವೇಣೂರು ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಇಂದು ಅದ್ಧೂರಿಯಾಗಿ ಆರಂಭವಾಗಿದೆ. ಇಂದಿನಿಂದ ಮಾರ್ಚ್ 1ರ ವರೆಗೆ ಈ ಮಹೋತ್ಸವ ನಡೆಯಲಿದೆ. ಇದು ಶತಮಾನದ 3ನೇ ಮಹಾಮಸ್ತಕಾಭಿಷೇಕವಾಗಿದೆ.
ಮಾ.1ರವರೆಗೂ ಪ್ರತಿದಿನ ಸಂಜೆ ಗಂಟೆ 6:45 ರಿಂದ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಲಿದೆ. ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಅರಿಶಿಣ ಹುಡಿ, ಕಷಾಯ, ಗಂಧ, ಕೇಸರಿ, ಚಂದನ, ಅಷ್ಟಗಂಧ ಮೊದಲಾದ ದ್ರವ್ಯಗಳ ಅಭಿಷೇಕದ ಬಳಿಕ ಪುಷ್ಪವೃಷ್ಠಿ ಜರುಗಲಿದೆ. ಇಂದು ಸಂಜೆ ನಡೆದ ಸಮಾರಂಭದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ 108 ಶ್ರೀಅಮೋಘಕೀರ್ತಿ ಮಹಾರಾಜರು ಹಾಗೂ 108 ಶ್ರೀ ಅಮರಕೀರ್ತಿ ಮಹಾರಾಜರು. ಡಾ.ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಹಾರಿಕಾ ಮಾತಾಜಿ, ಕುಲಿಕಾ ಮಾತಾಜಿ ಪಾವನ ಸಾನ್ನಿಧ್ಯ ವಹಿಸಿ, ಆಶೀರ್ವದಿಸಿದರು. ಅಳದಂಗಡಿ ಅರಮನೆಯ ಸ್ಥಾಪಕ ವಂಶಿಯ ಅರಸರು ಮತ್ತು ಕಾರ್ಯಾಧ್ಯಕ್ಷರು ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಗೌರವ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.