ದಕ್ಷಿಣ ಕನ್ನಡ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ನಲ್ಲಿ ಗುಡ್ಡ ಕುಸಿದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು-ಮಾಣಿ ಹೆದ್ದಾರಿಯ ಮಡಿಕೇರಿ ಘಾಟ್ ಅನ್ನು ರಾತ್ರಿ 8 ಗಂಟೆಗೆ ಯಾವುದೇ ಮುನ್ಸೂಚನೆ ನೀಡದೇ ಕೊಡಗು ಮತ್ತು ದ.ಕ. ಜಿಲ್ಲಾಡಳಿತ ಹಠಾತ್
ಬಂದ್ ಮಾಡಿತ್ತು.
ಮಡಿಕೇರಿ ಜನರಲ್ ಕಾರ್ಯಪ್ಪ ಸರ್ಕಲ್ ಬಳಿ ಮತ್ತು ಘಾಟಿ ಮಧ್ಯೆ ಮದೆನಾಡಿನಲ್ಲಿ ಹಾಗೂ ಸಂಪಾಜೆ ಚೆಕ್ ಪೋಸ್ಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದರು. ಯಾವುದೇ ಮುನ್ಸೂಚನೆ ಇಲ್ಲದಿರುವುದರಿಂದ ನೂರಾರು ವಾಹನಗಳು ಅಡಕತ್ತರಿಯಲ್ಲಿ ಸಿಲುಕಿದ್ದವು. ಹಲವಾರು ವಾಹನಗಳಲ್ಲಿದ್ದ ಮಹಿಳೆಯರು, ಮಕ್ಕಳು ಘಾಟ್ ಮಧ್ಯೆ ಮದೆನಾಡು ಮತ್ತು ಸಂಪಾಜೆಯ ಕುಗ್ರಾಮದಲ್ಲಿ ಸಿಲುಕಿದ್ದರು.
ಘಾಟ್ ರಸ್ತೆಯಲ್ಲಿ ಯಾವುದೇ ಅನಾಹುತವಾಗದೇ ಇದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಹಠಾತ್ ರಸ್ತೆ ನಿರ್ಬಂಧ ಮಾಡಲಾಗಿತ್ತು. ಆ ರಸ್ತೆ ಮೂಲಕ ಮಧ್ಯರಾತ್ರಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ ಅವರು ಈ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಅವರ ಗಮನ ಸೆಳೆದರು. ರಶೀದ್ ಜೊತೆಗೆ ಅವರ ಸ್ನೇಹಿತ ಅಬೂಬಕರ್ ಪುತ್ತು ಕೂಡಾ ಇದ್ದರು. ಮಧ್ಯರಾತ್ರಿ 12.30 ಕ್ಕೆ ಯು.ಟಿ.ಖಾದರ್ ಅವರಿಗೆ ಪೋನ್ ಮಾಡಲಾಗಿತ್ತು. ತಕ್ಷಣ ಅವರು ಮಂಗಳೂರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಅವರಿಗೆ ಕರೆ ಮಾಡಿದರಲ್ಲದೇ, ಅವರಿಗೆ ವಸ್ತುಸ್ಥಿತಿಯ ವಿವರಣೆ ನೀಡುವಂತೆ ರಶೀದ್ಗೆ ತಿಳಿಸಿದರು. ಅದರಂತೆ ರಶೀದ್ ಹಾಗೂ ಅವರ ಸ್ನೇಹಿತ ಜಿಲ್ಲಾಧಿಕಾರಿ ಮತ್ತು ಎಸ್ಪಿಯವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದರು.