ಶಿವಮೊಗ್ಗ: ಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ಇಂದಿನಿಂದ (ಸೋಮವಾರ) ನೀರು ಹರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ಹೊರವಲಯದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ಈ ಬಾರಿ ಭದ್ರಾ ಹಿನ್ನೀರು ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಅಣೆಕಟ್ಟು ತುಂಬುವ ಸನಿಹ ಬಂದಿದೆ. ಹೀಗಾಗಿ ಸೋಮವಾರದಿಂದಲೇ ನಾಲೆಗಳಿಗೆ ನೀರು ಹರಿಸಲಾಗುವುದು. ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಲಾಗಿದೆ" ಎಂದರು.
"ನಾಲೆಯ ಕೊನೆಯ ಭಾಗದವರಿಗೆ ನೀರು ತಲುಪಿಸಬೇಕೆಂದು ತಿಳಿಸಲಾಗಿದೆ. ಈ ಭಾಗದಲ್ಲಿ ಅಣೆಕಟ್ಟು ಸೇರಿದಂತೆ ನಾಲೆಗಳು ಅಭಿವೃದ್ಧಿ ಆಗಬೇಕು ಎಂದು ಶಾಸಕರು ಹಾಗೂ ರೈತ ಮುಖಂಡರು ತಿಳಿಸಿದ್ದಾರೆ. ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರನ್ನು ನಮ್ಮ ಜಿಲ್ಲೆಗೆ ಕರೆದು, ಜಿಲ್ಲೆಯ ಅಣೆಕಟ್ಟುಗಳ ಅಭಿವೃದ್ದಿ, ವಿಸ್ತರಣೆ ಹಾಗೂ ನೂತನ ಯೋಜನೆಗಳಿದ್ದರೆ ತಿಳಿಸುವ ಉದ್ದೇಶವಿದೆ. ಮುಂದಿನ ಹದಿನೈದು ದಿನದ ಒಳಗಾಗಿ ಸಚಿವರನ್ನು ಕರೆದು ಅಣೆಕಟ್ಟುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಕಡೆ ಗಮನ ಸೆಳೆಯುವ ಉದ್ದೇಶವಿದೆ" ಎಂದು ತಿಳಿಸಿದರು.