ಹುಬ್ಬಳ್ಳಿ:"ದರ್ಶನ್ಗೆ ರಾಜಮರ್ಯಾದೆ ಕೊಡುವ ಪ್ರಶ್ನೆಯೇ ಇಲ್ಲ. ಆರೋಪಿ ಆರೋಪಿಯೇ. ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆ ಆಗುತ್ತದೆ. ದರ್ಶನ್ ಕೃಷಿ ಇಲಾಖೆ ರಾಯಭಾರಿಯಾಗಿ ಮುಂದುವರೆಯುವ ಪ್ರಶ್ನೆಯೇ ಇಲ್ಲ. ಇಂತಹ ಘಟನೆಯಾದ ನಂತರ ರಾಯಭಾರಿಯಾಗಿ ಮುಂದುವರಿಸೋಕೆ ಆಗಲ್ಲ" ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರಿಗೆ ರಾಜಮರ್ಯಾದೆ ಕೊಡುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದರು.
ಸಚಿವ ಎಂ.ಬಿ.ಪಾಟೀಲ್ (ETV Bharat) "ಮೂವರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವನ್ನು ಪಕ್ಷದ ಆಂತರಿಕ ವಲಯದಲ್ಲಿ ಚರ್ಚಿಸುತ್ತೇವೆ. ಬಹಿರಂಗವಾಗಿ ಚರ್ಚೆಸುವುದಕ್ಕೆ ಆಗಲ್ಲ. ಈಗಾಗಲೇ ಪಕ್ಷದ ಆಂತರಿಕ ವೇದಿಕೆಯಲ್ಲಿ ನಮ್ಮ ವಿಚಾರ ತಿಳಿಸಿದ್ದೇವೆ. ಮುಂದೆಯೂ ಅಗತ್ಯವಿದ್ದಲ್ಲಿ ಅಭಿಪ್ರಾಯ ತಿಳಿಸುತ್ತೇವೆ. ಸಿಎಂ ಆಗಲು ಶಾಸಕರ ಬೆಂಬಲ ಬೇಕು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಸಿಎಂ ಖುರ್ಚಿ ಖಾಲಿ ಇಲ್ಲ. ಹಾಗಾಗಿ ಸದ್ಯಕ್ಕೆ ಆ ಪ್ರಶ್ನೆ ಬರುವುದಿಲ್ಲ"
60 ಶಾಸಕರು ರಾಜೀನಾಮೆ ಕೊಡುವುದು ಹುಡುಗಾಟವೇ?:ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಮೊದಲು ಅವರು ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳೋಕೆ ಹೇಳಿ. ನಮ್ಮ ಸರ್ಕಾರವನ್ನು ಪತನಗೊಳಿಸಬೇಕಾದರೆ 60 ಶಾಸಕರು ರಾಜೀನಾಮೆ ನೀಡಬೇಕು. ಬಿಜೆಪಿಯ ಒಬ್ಬರು ಶಾಸಕರು ನಮ್ಮ ಜೊತೆಗೆ ಇದ್ದಾರೆ. ಜೆಡಿಎಸ್ನ ಬಹಳಷ್ಟು ಶಾಸಕರು ನಮ್ಮ ಪಕ್ಷ ಸೇರ್ಪಡೆಗೆ ಸಿದ್ಧರಾಗಿದ್ದಾರೆ. ನಮ್ಮಲ್ಲಿ 60 ಶಾಸಕರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಬೇಕಾಗುತ್ತದೆ. ಇದೇನೂ ಹುಡುಗಾಟವೇ" ಎಂದು ಪ್ರಶ್ನಿಸಿದರು.
"ಒಬ್ಬ ಶಾಸಕನೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ" ಎಂದು ಖಡಾಖಂಡಿತವಾಗಿ ಹೇಳಿದರಲ್ಲದೇ, ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವ ಪ್ರಸ್ತಾವನೆ ನಮ್ಮ ಬಳಿ ಸದ್ಯಕ್ಕಿಲ್ಲ" ಎಂದರು. "ಇನ್ನೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕಾ ಸಚಿವರಾಗಿದ್ದು, ಕೆಲ ಬೇಡಿಕೆಗಳನ್ನು ಶೀಘ್ರವಾಗಿ ಸಲ್ಲಿಸಲಾಗುತ್ತದೆ. ರಾಜ್ಯಕ್ಕೆ ಮಹತ್ವದ ಖಾತೆಗಳು ಸಿಕ್ಕಿರುವುದರಿಂದ ನಮ್ಮ ರಾಜ್ಯಕ್ಕೂ ಒಂದಿಷ್ಟು ನೆರವಾಗಲಿದೆ" ಎಂದರು.
ಸೋಲಿನ ಕುರಿತು ಆತ್ಮಾವಲೋಕನ: "ಲೋಕಸಭೆಯಲ್ಲಿ ಲೀಡ್ ತಂದುಕೊಡದ ಸಚಿವರ ತಲೆದಂಡ ಇದೊಂದು ಮಾಧ್ಯಮಗಳ ಸೃಷ್ಟಿ, ಎಲ್ಲರೂ ಗಂಭೀರವಾಗಿ ಚುನಾವಣೆ ಮಾಡಿ ಅಂತ ಸೂಚನೆ ನೀಡಲಾಗಿತ್ತು. ಚುನಾವಣೆಯಲ್ಲಿ ಸೋಲಿನ ಕುರಿತು ಪಕ್ಷದ ವೇದಿಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ" ಎಂದರು.
ಬಿ.ಎಸ್.ವೈ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯಿಲ್ಲ:ಪೋಕ್ಸೋ ಕಾಯ್ದೆಯಡಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ. ಈ ಪ್ರಕರಣ ಕುರಿತಂತೆ ಸರ್ಕಾರ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ರಾಜ್ಯದಲ್ಲಿ ಚಿತ್ರದುರ್ಗದ ಮುರಘಾಮಠದ ಸ್ವಾಮಿಗಳ ಪ್ರಕರಣವನ್ನು ನೋಡಿದ್ದೀರಿ. ಪೋಕ್ಸೋ ಕಾಯ್ದೆಯಡಿ ತನ್ನದೇ ಆದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹೈಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಕೋರ್ಟ್ನ ನಿರ್ದೇಶನ ಇರಬೇಕಾದರೆ ಕಾಂಗ್ರೆಸ್ ಬಿಜೆಪಿಯ ಪ್ರಶ್ನೆ ಬರಲ್ಲ. ತಪ್ಪಿತಸ್ಥರು ಹೌದೋ ಅಲ್ಲವೋ ಅನ್ನೋದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಸಂತ್ರಸ್ತೆಯೇ ನ್ಯಾಯಾಧೀಶರ ಎದುರು ಹೇಳಿಕೆ ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದು ಅವರು ಹೇಳಿದರು.
ಇದನ್ನೂ ಓದಿ:ಪೋಕ್ಸೋ ಕೇಸ್ ರದ್ದು ಕೋರಿದ ಯಡಿಯೂರಪ್ಪ ಅರ್ಜಿ ನಾಳೆ ವಿಚಾರಣೆ - BSY POCSO Case