ಮಂಡ್ಯ:ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ನೆರವೇರಿಸಿದ ಪಿಎಂ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲು ಪತ್ರ ಅಭಿಯಾನಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಚಾಲನೆ ನೀಡಿದರು.
ಕೋಟ್ಯಂತರ ಭಕ್ತರ ಕನಸು ನನಸು:ಮುಖ್ಯ ಅಂಚೆ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಪತ್ರ ಬರೆದು ಪಿಎಂಗೆ ಅಭಿನಂದನೆ ಕಳುಹಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಿಂದಾಗಿ ಭಾರತೀಯ ಕೋಟ್ಯಂತರ ಭಕ್ತರ ಕನಸು ಈಡೇರಿದೆ.
ಇದಕ್ಕಾಗಿ ನಿರಂತರ ಹೋರಾಟ ಮಾಡಿದ್ದ ಹೋರಾಟಗಾರರಿಗೆ ಫಲ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷ ನೇತೃತ್ವ, ಬದ್ಧತೆ, ಸಕಾಲಿಕ ನಿರ್ಣಯಗಳಿಂದಾಗಿ ಇಂಥ ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆ. ಆದ್ದರಿಂದ ಅವರಿಗೆ ಪತ್ರದ ಮೂಲಕ ಅಭಿನಂದನೆ ಸಲ್ಲಿಸಲು ಪತ್ರದ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಫೆ 14 ರ ವರೆಗೆ ಪತ್ರದ ಅಭಿಯಾನ: ಫೆ.14ರ ವರೆಗೆ ಪತ್ರ ಅಭಿಯಾನ ಮುಂದುವರಿಯುತ್ತದೆ. ಸಮಾಜದ ಗಣ್ಯರು, ಮಠಾಧೀಶರು, ರಾಜ್ಯೋತ್ಸವ, ನಾಡೋಜ ಪುರಸ್ಕೃತರು, ಪದ್ಮಭೂಷಣ, ಪದ್ಮವಿಭೂಷಣ, ಖೇಲ್ ರತ್ನ ವಿಜೇತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಸಾರ್ವಜನಿಕರು ಸೇರಿದಂತೆ ಸಮಸ್ತ ಭಾರತೀಯರು ಅವರ ಕೈ ಬಲಪಡಿಸಲು, ಪ್ರೋತ್ಸಾಹ ನೀಡಲು ಅಭಿನಂದನಾ ಪತ್ರ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ ಸುಮಾರು 10 ಸಾವಿರ ಪತ್ರ ಬರೆಯುವ ಗುರಿ ಹೊಂದಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.