ಬೆಂಗಳೂರು/ರಾಯಚೂರು/ಬೆಳಗಾವಿ:ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯದ 7 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಬೆಳಗಾವಿಯ ಎರಡು ಸ್ಥಳಗಳು, ಚಿತ್ರದುರ್ಗ, ಬಾಗಲಕೋಟೆ, ರಾಯಚೂರು ಜಿಲ್ಲೆಯ ತಲಾ ಒಂದೊಂದು ಕಡೆಗಳಲ್ಲಿ ಬೆಳಗ್ಗೆಯಿಂದಲೇ ಅಧಿಕಾರಿಗಳು ಶೋಧ ಕಾರ್ಯದಲ್ಲಿದ್ದಾರೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಬಿಬಿಎಂಪಿ ವಲಯದ ಇಂಜಿನಿಯರಿಂಗ್ ವಿಭಾಗದ ಎಇಇ ಮಾಧವ ರಾವ್ ಅವರ ವಿದ್ಯಾರಣ್ಯಪುರದ ನಿವಾಸ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ಟಿ.ಕೆ.ರಮೇಶ್ ನಿವಾಸ, ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಹೊಲಗೇರಿ ಗ್ರಾಮ ಪಂಚಾಯಿತಿ ಪಿಡಿಒ ಶಿವಲಿಂಗಯ್ಯ ಹಿರೇಮಠ ಅವರ ನಿವಾಸ, ಬೆಳಗಾವಿ ಉತ್ತರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಸಚಿನ್ ಮಾಂಡೆದ್, ಬೆಳಗಾವಿಯ ರಾಯಭಾಗದ ವೆಟರ್ನರಿ ಇನ್ಸ್‌ಪೆಕ್ಟರ್ ಸಂಜಯ್ ಅಣ್ಣಪ್ಪ ದುರ್ಗಣ್ಣವರ್ ನಿವಾಸ ಸೇರಿ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರು ಲೋಕಾಯುಕ್ತ ಎಸ್ಪಿ ಡಾ.ಕೆ.ವಂಶಿಕೃಷ್ಣ:ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ 9 ತಂಡಗಳು ಇಂದು ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿವೆ. ಬಿಬಿಎಂಪಿ ಹೆಬ್ಬಾಳ ಉಪ ವಿಭಾಗದ ಎಇಇ ಮಾಧವ ರಾವ್ ಅವರ ಮನೆ ಸೇರಿದಂತೆ ಎರಡು ಸ್ಥಳಗಳಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ಟಿ.ಕೆ ರಮೇಶ್ ಅವರ ಮನೆ, ಶಾಲೆ, ಹುಲಿಯೂರು ದುರ್ಗದಲ್ಲಿರುವ ಜಮೀನು ಸೇರಿದಂತೆ ನಾಲ್ಕು ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ದಾಖಲೆಗಳ ಪರಿಶೀಲನೆ ಮುಂದುವರೆದಿದೆ ಎಂದು ಲೋಕಾಯುಕ್ತ ಎಸ್.ಪಿ ಡಾ.ಕೆ ವಂಸಿಕೃಷ್ಣ ಮಾಹಿತಿ ನೀಡಿದ್ದಾರೆ.
ಜಿ.ಪಂ.ಲೆಕ್ಕಪತ್ರ ಸಹಾಯಕ ಅಧಿಕಾರಿ ಮೇಲೆ ದಾಳಿ: ರಾಯಚೂರು ಜಿ.ಪಂ.ಲೆಕ್ಕಪತ್ರ ಸಹಾಯಕ ಅಧಿಕಾರಿ ನರಸಿಂಗ್ ರಾವ್ ಗುಜ್ಜರ್ ಅವರ ರಾಯಚೂರಿನ ಜವಾರ್ ಕಾಲೋನಿಯಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.