ಶಿವಮೊಗ್ಗ:ಲೋಕಸಭೆ ಚುನಾವಣೆಯ ಬಿಜೆಪಿಯ ಎರಡನೇ ಪಟ್ಟಿ ಅದಷ್ಟು ಬೇಗ ಬಿಡುಗಡೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾಳೆ, ನಾಡಿದ್ದು ನಾನು ದೆಹಲಿಯಲ್ಲಿ ನಡೆಯುವ ಸಭೆಗೆ ಹಾಜರಾಗಲು ತೆರಳುತ್ತಿದ್ದೇನೆ. ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ. ಎರಡನೇ ಪಟ್ಟಿಯನ್ನು ನಿಧಾನ ಮಾಡದೇ ಬಹುಬೇಗ ಬಿಡುಗಡೆ ಮಾಡುತ್ತೇವೆ ಎಂದರು.
ಹೊಸಬರಿಗೆ, ಹಳಬರಿಗೆ ಆದ್ಯತೆ ವಿಚಾರ ನನಗೆ ತಿಳಿದಿಲ್ಲ. ದೆಹಲಿಯಲ್ಲಿ ಈ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡಲಿದ್ದಾರೆ. ಸುಮಲತಾ ಅಂಬರೀಶ್ ಮಂಡ್ಯ ಸ್ಪರ್ಧೆ ವಿಚಾರವೂ ಕೂಡ ದೆಹಲಿಯಲ್ಲಿ ಫೈನಲ್ ಆಗಲಿದೆ ಎಂದು ಬಿಎಸ್ವೈ ತಿಳಿಸಿದರು.
ಕರಂದ್ಲಾಜೆ ವಿರುದ್ಧ ಅಭಿಯಾನ ವಿಚಾರ:ಇದಕ್ಕೆ ಅರ್ಥವಿಲ್ಲ. ದುರುದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಶೋಭಾ ಕರಂದ್ಲಾಜೆ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸದವರು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಬಿಎಸ್ವೈ ಹೇಳಿದರು.
ಎಫ್ಎಸ್ಎಲ್ ವರದಿ ಬಿಡುಗಡೆ ವಿಚಾರ:ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿಯನ್ನು ಅದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಯಡಿಯೂರಪ್ಪ ಆಗ್ರಹಿಸಿದರು. ಇದನ್ನು ನಿಧಾನ ಮಾಡದೇ ಬೇಗ ಬಿಡುಗಡೆ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ. ಯಾಕೆ ಅದನ್ನು ಮುಚ್ಚಿಡುತ್ತಿದ್ದಾರೋ ಗೊತ್ತಿಲ್ಲ ಎಂದರು.
ರಾಮೇಶ್ವರಂ ಹೋಟೆಲ್ ಬ್ಲಾಸ್ಟ್ ವಿಚಾರ: ಬಾಂಬ್ ಸ್ಫೋಟ ವಿಚಾರ ಕೂಡ ತಡ ಮಾಡದೇ ಬಹಿರಂಗ ಮಾಡಬೇಕು. ಆರೋಪಿಗಳು ಯಾರೇ ಆಗಿರಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಬಾಂಬ್ ಸ್ಫೋಟ ವಿಚಾರ ಸಿಲ್ಲಿ ಮ್ಯಾಟರ್ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಇಂತಹ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ರಾಜ್ಯದಲ್ಲಿ ಭೀಕರ ಬರ: ರಾಜ್ಯದಲ್ಲಿನ ಬರದ ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿ ಒಂದು ಲೀಟರ್ ನೀರು ಕೊಂಡು ಕುಡಿಯುವ ಪರಿಸ್ಥಿತಿ ಬಂದಿದೆ. ಸರ್ಕಾರ ಯಾವ ವಿಚಾರವನ್ನೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬಿಎಸ್ವೈ ಆರೋಪಿಸಿದರು.
ಓದಿ:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಎನ್ಐಎಗೆ ಹಸ್ತಾಂತರ; FIR ದಾಖಲು, ತನಿಖೆ ಆರಂಭ