ಬೆಂಗಳೂರು: ಕರ್ನಾಟಕ ಲೋಕಸಮರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮೇಲುಗೈ ಸಾಧಿಸಿದರೆ, ಕಾಂಗ್ರೆಸ್ ಎರಡಂಕಿಯ ಸ್ಥಾನಗಳನ್ನು ಪಡೆಯದೇ ತುಸು ಹಿನ್ನಡೆ ಅನುಭವಿಸಿದೆ. ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳಿದ್ದರೂ ನಿರೀಕ್ಷಿತ ಫಲಿತಾಂಶ ಪಡೆಯವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ 19 ಸ್ಥಾನ ಗೆದ್ದರೆ, ಕಾಂಗ್ರೆಸ್ 9 ಸ್ಥಾನ ಗೆದ್ದುಕೊಂಡಿದೆ. ಪ್ರಸಕ್ತ ಚುನಾವಣೆಯಲ್ಲಿ ಕೈ ಪಕ್ಷ 20 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ, ಈ ಲೆಕ್ಕ ತಲೆಕೆಳಗಾಗಿದೆ.
ಫಲ ನೀಡದ ಪಂಚ ಗ್ಯಾರಂಟಿ:ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪಂಚ ಗ್ಯಾರಂಟಿ ನಿರೀಕ್ಷಿತ ಫಲ ನೀಡುವಲ್ಲಿ ಸಫಲವಾಗಿಲ್ಲ. ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 136 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಪಂಚ ಗ್ಯಾರಂಟಿಗಳು ಭರ್ಜರಿ ಗೆಲುವಿಗೆ ಕಾರಣವಾಗಿದ್ದವು. ಆದರೆ ಈ ಮ್ಯಾಜಿಕ್ ಲೋಕಸಮರದಲ್ಲಿ ಅಷ್ಟಾಗಿ ಫಲ ನೀಡಿದಂತೆ ಕಾಣುತ್ತಿಲ್ಲ.
ಒಂದೆಡೆ ಅಧಿಕಾರ, ಮತ್ತೊಂದೆಡೆ ಪಂಚ ಗ್ಯಾರಂಟಿ ಅಲೆಯಿಂದ ಲೋಕಸಭೆ ಚುನಾವಣೆಯಲ್ಲಿ 18-20 ಸ್ಥಾನ ಗೆಲ್ಲುವ ವಿಶ್ವಾಸ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗಿತ್ತು. ಆದರೆ ವಾಸ್ತವದಲ್ಲಿ ಅದರ ಮ್ಯಾಜಿಕ್ ಅಷ್ಟೊಂದು ನಡೆದಿಲ್ಲ ಎಂಬುದು ಫಲಿತಾಂಶದಿಂದ ಗೊತ್ತಾಗುತ್ತದೆ.
ಸ್ವತಃ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಕಂಡಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಮೈತ್ರಿ ಮ್ಯಾಜಿಕ್ ಮುಂದೆ ಪಂಚ ಗ್ಯಾರಂಟಿ ಪ್ರಭಾವ ಗೌಣವಾಗಿದೆ.
ಹೀಗಾಗಿ, ಪಂಚ ಗ್ಯಾರಂಟಿಯನ್ನು ರಾಜ್ಯದ ಜನರಿಗೆ ಮುಟ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಪಂಚ ಗ್ಯಾರಂಟಿ ಗೊಂದಲ, ಅದರ ಅಸಮರ್ಪಕ ಅನುಷ್ಠಾನ ಮತ್ತು ಪಂಚ ಗ್ಯಾರಂಟಿಯಿಂದ ಅಭಿವೃದ್ಧಿ ಕುಂಟಿತವಾಗುತ್ತಿದೆ ಎಂದು ಪ್ರತಿಪಕ್ಷಗಳು ಯಶಸ್ವಿಯಾಗಿ ರಾಜ್ಯ ಸರ್ಕಾರದ ವಿರುದ್ಧದ ಹೋರಾಟ ಮಾಡಿರಿವುದು ಕಾಂಗ್ರೆಸ್ಗೆ ಹಿನ್ನಡೆ ಉಂಟುಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ:ಸಿಎಂ - ಡಿಸಿಎಂ ತವರಲ್ಲೇ ಸೋಲು, ಕಲ್ಯಾಣ ಕರ್ನಾಟಕದಲ್ಲಿ ಗೆಲುವು: ಸೋಲಿನ ಸೇಡು ತೀರಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ - KARNATAKA LOK SABHA RESULTS