ಧಾರವಾಡ: ಲೋಕಸಭಾ ಚುನಾವಣೆಯ ಅಂಗವಾಗಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಾಗಿದೆ. ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಹಳಿಯಾಳ ಚೆಕ್ ಪೋಸ್ಟ್ನಲ್ಲಿ ಅಧಿಕಾರಿಗಳು ಕಾರು ತಪಾಸಣೆ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರ ಬಳಿ ದಾಖಲೆ ಇಲ್ಲದ 1.49 ಲಕ್ಷ ರೂ ಪತ್ತೆಯಾಗಿದೆ. ಮಹಮ್ಮದ್ ಶಂಶುದ್ದೀನ್ ಎಂಬವರ ಬಳಿ ಇದ್ದ ಈ ಹಣವನ್ನು ವಶಕ್ಕೆ ಪಡೆದಿದ್ದು, ಖಜಾನೆಯಲ್ಲಿ ಠೇವಣಿ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಅಳ್ನಾವರ ಪಟ್ಟಣ ನಿವಾಸಿಯಾದ ಮಹಮ್ಮದ್ ಶಂಶುದ್ದೀನ್ ಹುಬ್ಬಳ್ಳಿಯಿಂದ ಕಾರ್ ಮೂಲಕ ಅಳ್ನಾವರಕ್ಕೆ ತೆರಳುವಾಗ ಹಳಿಯಾಳ ಚೆಕ್ ಪೋಸ್ಟ್ನಲ್ಲಿ ಅವರ ಕಾರು ತಪಾಸಣೆ ಮಾಡಲಾಗಿದೆ. ಈ ಕುರಿತು ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸಲು ಸೀಜರ್ ಕಮಿಟಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಧಾರವಾಡ: ಅಬಕಾರಿ ಇಲಾಖೆ ಅಧಿಕಾರಿಗಳಿಂದ 25 ಲಕ್ಷ ರೂ. ಮೌಲ್ಯದ ಅಕ್ರಮ ಸ್ಪಿರಿಟ್ ಟ್ಯಾಂಕರ್ ವಶ
ನವಲಗುಂದ-ರೋಣ ಚೆಕ್ ಪೋಸ್ಟ್:ಗೋಕಾಕದಿಂದ ಕುರ್ತುಕೋಟಿಗೆ ಹೋಗುವ ಗೂಡ್ಸ್ ವಾಹನ (ಕೆಎ-63 ಎ 2739) ಪರಿಶೀಲಿಸಲಾಗಿದ್ದು, ಕುರ್ತಕೋಟಿ ಗ್ರಾಮದ ಪರಶುರಾಮ ದೇವಪ್ಪ ಕೊರವರ ಎಂಬವರ ಬಳಿ 73,670 ರೂ ನಗದು ಪತ್ತೆಯಾಗಿದೆ. ಯಾವುದೇ ದಾಖಲೆಗಳಿಲ್ಲದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಬಳ್ಳಾರಿಯಲ್ಲಿ 629.94 ಲೀ ಮದ್ಯ, ₹26 ಲಕ್ಷ, ಗಾಂಜಾ ವಶ- ಡಿಸಿ ಮಿಶ್ರಾ:ಸಂಡೂರು ತಾಲೂಕಿನಲ್ಲಿ ಶುಕ್ರವಾರ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧಿಕೃತವಾಗಿ ಸಾಗಿಸುತ್ತಿದ್ದ 629.94 ಲೀಟರ್ (ರೂ.2,53,141 ಮೌಲ್ಯ) ಮದ್ಯ, 26 ಲಕ್ಷ ರೂ ನಗದು ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಒಟ್ಟು 44 ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.
ಬಾಗಲಕೋಟೆಯಲ್ಲಿ 345 ಲೀ ಮದ್ಯ ವಶ:ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಮದಭಾವಿ ಗ್ರಾಮದ ಅರುಣ ಮಲ್ಲಪ್ಪ ಕಲ್ಲೋಳ್ಳಿ ಎಂಬುವರ ಮನೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟ 1.50 ಲಕ್ಷ ರೂ. ಮೌಲ್ಯದ 345 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿವರೆಗೆ ಒಟ್ಟು 37 ಅಬಕಾರಿ ಪ್ರಕರಣ ದಾಖಲಿಸಿ 35 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಸಮರ್ಪಕ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ವಶ