ಮತದಾನ ಮಾಡಿದ ಬಸವರಾಜ ಬೊಮ್ಮಾಯಿ (ETV Bharat) ಹಾವೇರಿ:ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಇಂದು ಶಿಗ್ಗಾಂವಿಯಲ್ಲಿ ಮತದಾನ ಮಾಡಿದರು. ಬಸವರಾಜ ಬೊಮ್ಮಾಯಿ ಅವರು ಪುತ್ರ, ಪುತ್ರಿ ಜೊತೆಗೆ ಶಿಗ್ಗಾಂವಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಮತದಾನ ನಂತರ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ''ದೇಶದಲ್ಲಿ ಮೂರನೇ ಹಂತದ ಮತದಾನ ಜರುಗುತ್ತಿದೆ. ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ನಾನು ಭಾಗಿಯಾಗಿದ್ದೇನೆ. ನೀವು ಭಾಗಿಯಾಗಿ'' ಎಂದು ಕರೆ ನೀಡಿದರು.
ವೋಟ್ ಮಾಡಿದ ಕೆ.ಎಸ್. ಈಶ್ವರಪ್ಪ:ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಹಾಗೂ ಅವರ ಕುಟುಂಬದ ಸದಸ್ಯರು ಮತದಾನ ಮಾಡಿದರು. ನಗರದ ಸೈನ್ಸ್ ಮೈದಾನದ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಈಶ್ವರಪ್ಪ ಮಾತನಾಡಿ, ''ರಾಜ್ಯದಲ್ಲಿಂದು ಲೋಕಸಭೆ ಚುನಾವಣೆಯ ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ದಿಟ್ಟ ಹೆಜ್ಜೆಯಾಗಿದೆ '' ಎಂದು ಹೇಳಿದರು.
ವೋಟ್ ಮಾಡಿದ ಕೆ.ಎಸ್. ಈಶ್ವರಪ್ಪ (ETV Bharat) ''ಈ ನಡುವೆ ನೀಚ ಕೆಲಸ ನಡೆಯುತ್ತಿದೆ. ಅವರ ಪರ ಪ್ರಚಾರ ಮಾಡುತ್ತಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಅಭ್ಯರ್ಥಿಗೆ ಸೋಲುವ ಭಯ ಶುರುವಾಗಿದೆ. ನೀಚತನದ ಷಡ್ಯಂತ್ರ ನನ್ನ ವಿರುದ್ಧ ಮಾಡಲಾಗುತ್ತಿದೆ. ಸೋಲುವ ಭಯದಿಂದ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ನಾನೂ ಚುನಾವಣೆ ಕಣದಲ್ಲಿ ಇದ್ದೇನೆ. ನನ್ನ ವಿರುದ್ಧ ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಚುನಾವಣೆಯಲ್ಲಿ ಗೆಲ್ಲುವುದು ಖಚಿತ. ಕ್ಷೇತ್ರದಲ್ಲಿ ನನಗೆ ಉತ್ತಮ ಬೆಂಬಲ ಸಿಗುತ್ತಿದೆ'' ಎಂದು ಕೆ. ಎಸ್. ಈಶ್ವರಪ್ಪ ಬಿಜೆಪಿ ಪಕ್ಷದ ಅಭ್ಯರ್ಥಿ ರಾಘವೇಂದ್ರ ವಿರುದ್ಧ ಗರಂ ಆದರು.
ಇದನ್ನೂ ಓದಿ:ಮೊದಲ ಬಾರಿ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಮತದಾನ: ಸೊಸೆ ಶ್ರದ್ಧಾ, ಸಂಸದೆ ಮಂಗಲ ಅಂಗಡಿ ಸಾಥ್ - Jagadish Shettar Casts Vote